ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಗಂಗಾವತಿ ನೀಲಕಂಠೇಶ್ವರ ವೃತ್ತದ ಮುಂದೆ ಗುಂಡಿ ಬಿದ್ದ ಸ್ಥಳದಲ್ಲಿ ಎಚ್ಚರಿಕೆ ಎಂಬ ಮಾಹಿತಿ ಪತ್ರಗಳನ್ನಿಟ್ಟು ವಿನೂತವಾಗಿ ಗುರುವಾರ ಪ್ರತಿಭಟನೆ ನಡೆಸಿದರು. ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ್, ರಾಘವೇಂದ್ರ ಕಡೇಬಾಗಿಲು ಇತರರಿದ್ದರು. 
ಕೊಪ್ಪಳ

ದುರಸ್ತಿಯಾಗದ ರಸ್ತೇಲಿ ಸಂಚಾರ ದುಸ್ತರ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ
  • ಅಧಿಕಾರಿಗಳ ನಿರ್ಲಕ್ಷೃಕ್ಕೆ ಆಕ್ರೋಶ
ಗಂಗಾವತಿ: ಹದಗೆಟ್ಟಿರುವ ನಗರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನೀಲಕಂಠೇಶ್ವರ ವೃತ್ತದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಗುಂಡಿ ಬಿದ್ದ ಸ್ಥಳದಲ್ಲಿ ಎಚ್ಚರಿಕೆ ಎಂಬ ಮಾಹಿತಿ ಪತ್ರವನ್ನಿಟ್ಟು ಜನರ ಗಮನಸೆಳೆದರಲ್ಲದೇ, ಬೇಡಿಕೆ ಮನವಿಯನ್ನು ನಗರಸಭೆ ವ್ಯವಸ್ಥಾಪಕ ಷಣ್ಮುಖಗೆ ಸಲ್ಲಿಸಿದರು.
ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ನಗರದ ಎಲ್ಲ ರಸ್ತೆಗಳು ಹಾಳಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಯಾಗುತ್ತಿಲ್ಲ. ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನಗಳ ಅಪಘಾತ ಹೆಚ್ಚುತ್ತಿದ್ದು, ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರು ಪ್ರಾಣಭಯದಿಂದ ಓಡಾಡುವ ಸ್ಥಿತಿ ಬಂದಿದೆ. ಗುಂಡಿಗಳನ್ನು ಮುಚ್ಚುವುದರ ಜತೆಗೆ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾರದ ಸಂತೆಯ ಜಾಗವನ್ನು ವಸತಿ ನಿಲಯ ನಿರ್ಮಾಣಕ್ಕೆ ಮೀಸಲಿಡಬೇಕಿದ್ದು, ಮೊದಲಿದ್ದ ಸ್ಥಳದಲ್ಲಿ ಬಯಲು ರಂಗ ಮಂದಿರ ನಿರ್ಮಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ್, ರಾಘವೇಂದ್ರ ಕಡೇಬಾಗಿಲು, ರಾಮಣ್ಣ ರುದ್ರಾಕ್ಷಿ, ಅರವಿಂದ ಯೋಗಿ, ಬಿ.ಕೆ.ಗಣೇಶ್, ಮಂಜುನಾಥ ಚನ್ನಾದಾಸರ್, ಹನುಮಂತ, ರಹೇಮಾನ್, ಚಂದ್ರಶೇಖರ್ ವಗ್ಗಾ ಇತರರಿದ್ದರು.

ಗುಂಡಿ ಮುಚ್ಚಲು ಮುಂದಾದ ನಗರಸಭೆ

ಹಾಳಾಗಿರುವ ನಗರದ ರಸ್ತೆ ಕುರಿತು ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನಗರಸಭೆ ಎಚ್ಚೆತ್ತುಕೊಂಡಿದ್ದು, ಮೊದಲ ಹಂತದಲ್ಲಿ ಗುಂಡಿ ಮುಚ್ಚುವ ತಾತ್ಕಾಲಿಕ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದೆ. ರಾತ್ರೋರಾತ್ರಿ ಹಿಟಾಚಿ ಮೂಲಕ ಜುಲಾಯಿನಗರದಲ್ಲಿ ರಸ್ತೆ ದುರಸ್ತಿ ಕೈಗೊಂಡಿದ್ದು, ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿದೆ. ಕಳೆದ 8 ವರ್ಷಗಳಿಂದ ರಸ್ತೆ ಅಭಿವೃದ್ಧಿ ಕೈಗೊಳ್ಳದ ನಗರಸಭೆ, 2ವರ್ಷಗಳಿಂದ ಗುಂಡಿ ಮುಚ್ಚಲು ಹರಸಾಹಸ ನಡೆಸುತ್ತಿದೆ. ಸಂಪೂರ್ಣ ಹಾಳಾಗಿರುವ ರಸ್ತೆಯ ಬಗ್ಗೆ ವಿಜಯವಾಣಿಯಲ್ಲಿ ಜು.15ರಂದು ‘ಸಿಟ್ಟಿಗೆದ್ದ ಗಂಗಾವತಿ ಸಿಟಿಜನ್’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಎಚ್ಚೆತ್ತುಕೊಂಡ ನಗರಸಭೆ ರಾತ್ರೋರಾತ್ರಿ ಕೆಲಸ ಶುರು ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.