ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ಮುಂದೆ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಬಾಲಪ್ಪ ಮಾತನಾಡಿದರು. ತಾಪಂ ಇಒ ರಾಜಶೇಖರ, ಆಡಳಿತಾಧಿಕಾರಿ ವಿರೂಪಾಕ್ಷಿ, ಪ್ರಭಾರ ಪಿಡಿಒ ಹನುಮಂತಪ್ಪ ಇತರರಿದ್ದರು. 
ಕೊಪ್ಪಳ

ಮನರೇಗಾವನ್ನೇ ಮುಂದುವರಿಸಿ

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಒತ್ತಾಯ
  • ಚಿಕ್ಕ ಡಂಕನಕಲ್ ಗ್ರಾಪಂ ಮುಂದೆ ಪ್ರತಿಭಟನೆ
ಕನಕಗಿರಿ: ಮನರೇಗಾ ಮರು ಸ್ಥಾಪನೆಗೆ ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ತಾಲೂಕಿನ ಚಿಕ್ಕ ಡಂಕನಕಲ್ ಗ್ರಾಪಂ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.
ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ, ಎಡಪಕ್ಷಗಳ ಬೆಂಬಲದ ಮೇಲೆ ಆಧಾರವಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಇದು ಗ್ರಾಮೀಣ ಭಾಗದ ಕೂಲಿಕಾರರು, ಬಡ ರೈತರು ಹಾಗೂ ಒಂದಿಲ್ಲೊಂದು ದುಡಿಮೆಯನ್ನೇ ಜೀವನಾಧಾರವಾಗಿಸಿಕೊಂಡ ಶೇ.30 ಜನರ ಜೀವನೋಪಯಕ್ಕೆ ಅನುಕೂಲವಾಗಿತ್ತು. ಆದರೆ, ಕೇಂದ್ರ ಸರ್ಕಾರ ನರೇಗಾವನ್ನು ತೆಗೆದು ಹಾಕಿ ವಿಕಸಿತ ಭಾರತ ರೋಜ್‌ಗಾರ ಮತ್ತು ಆಜೀವಿಕ ಮಿಷನ್ ಗ್ರಾಮೀಣ ಖಾತರಿ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದೆ. ಇದು ಕೂಲಿಕಾರರ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ. ಕಾರ್ಮಿಕರಿಗೆ 125 ದಿನಗಳ ಕೆಲಸ ಸಿಗದೇ ವಂಚಿತರಾಗುತ್ತಾರೆ. ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಮೊತ್ತ ಖರ್ಚು ಮಾಡಬೇಕೆಂಬ ಅಂಶಗಳಿಂದ ಅನುದಾನ ಬಿಡುಗಡೆಗೆ ಹಗ್ಗ ಜಗ್ಗಾಟ ಶುರುವಾಗಲಿದೆ. ಅಲ್ಲದೇ ಯಂತ್ರಗಳನ್ನು ಬಳಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಅಂಶಗಳನ್ನು ಹೊಸ ಕಾಯ್ದೆ ಒಳಗೊಂಡಿರುವುದು ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವುದಾಗಿದೆ. ಹೀಗಾಗಿ ನರೇಗಾವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ತಕ್ಷಣವೇ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ, ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ, ನರೇಗಾದಡಿ 200 ದಿನಗಳ ಕೆಲಸ, 700 ರೂ. ಕೂಲಿ, ನರೇಗಾಕ್ಕೆ ಬಳಸಿದ ರೈತರ ಟ್ರಾೃಕ್ಟರ್ ಬಾಡಿಗೆ ನೀಡಬೇಕು. ಮನೆ, ನಿವೇಶನ ರಹಿತರ ಅರ್ಜಿಯನ್ನು ಪಡೆದು ನಿವೇಶನದಾರರ ಪಟ್ಟಿ ತಯಾರಿಸಬೇಕು. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯ, ವಿದ್ಯುತ್, ಮಹಿಳೆಯರಿಗೆ ಸಾಮೂಹಿಕ ಶೌಚಗೃಹ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಚಂದ್ರಪ್ಪ ಹೊಸ್ಕೇರಾ, ಹಿರಿಯ ಉಪಾಧ್ಯಕ್ಷ ಗಂಗಾಧರಯ್ಯ ಸ್ವಾಮಿ, ಜಿಲ್ಲಾಧ್ಯಕ್ಷ ಬಸವರಾಜ ಎಂ., ಪ್ರಮುಖರಾದ ಯಮನಪ್ಪ ಕುಂಬಾರ, ಬಾಲಪ್ಪ ಈಳಿಗೇರ, ಪಂಪಾಪತಿ ಅಲಾಯಿಕುಣಿ, ಶರಣಪ್ಪ ಉಪ್ಪಾರ, ಮರಿಸ್ವಾಮಿ, ನಿಂಗಪ್ಪ, ಬಸವರಾಜ, ಬಸವರಾಜ ಪೋ.ಪಾ., ಯಂಕಣ್ಣ, ಸಣ್ಣ ದ್ಯಾವಮ್ಮ, ಹನುಮಂತೆಮ್ಮ, ಅನುಸೂಯಮ್ಮ, ಅಯ್ಯಮ್ಮ ಇತರರಿದ್ದರು.