ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಕಾಂಗ್ರೆಸ್ ಕ್ರಮ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನಗರ ಘಟಕದ ಸದಸ್ಯರು ಗಂಗಾವತಿ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರತ್ನಕುಮಾರಿ, ನಗರ ಘಟಕ ಅಧ್ಯಕ್ಷೆ ಭಾರತಿ ಆಗಲೂರು ಇತರರಿದ್ದರು.
- ಕಾಂಗ್ರೆಸ್ ನಡೆಗೆ ಬಿಜೆಪಿ ಮಹಿಳಾ ಮೋರ್ಚಾ ನಗರ ಘಟಕ ಖಂಡನೆ
ಗಂಗಾವತಿ: ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಕಾಂಗ್ರೆಸ್ ಕ್ರಮ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನಗರ ಘಟಕದ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಮಂಡಲ ಸಹಯೋಗದಲ್ಲಿ ನಗರದ ಸಿಬಿಎಸ್ ಎಪಿಎಂಸಿ ಗಂಜ್ ಆವರಣದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನೆ ರ‌್ಯಾಲಿ ನಡೆಸಿದರು.
ನಗರಸಭೆ ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ ಮಾತನಾಡಿ, ಮಹಿಳೆಯರಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹಿಳಾ ಮೀಸಲು ಮಸೂದೆ ಜಾರಿಗೆ ತಂದರೂ, ಕಾಂಗ್ರೆಸ್ ಅದರ ವಿರುದ್ಧ ಮತ ಚಲಾಯಿಸುವ ಮೂಲಕ ಮಹಿಳಾ ವಿರೋಧಿ ನೀತಿ ಅನುಸರಿಸಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೇ.50 ಮೀಸಲು ನೀಡಲು ಒಪ್ಪಿದ್ದರೂ, ವಿಪಕ್ಷಗಳ ಅಸಹಕಾರದಿಂದ ಕೈಗೂಡಲಿಲ್ಲ. ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಮೀಸಲು ವಿರೋಧಿಸುವ ಮೂಲಕ ಮಹಿಳೆಯರ ಮೇಲಿನ ಗೌರವ ಪ್ರದರ್ಶಿಸಿದೆ ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷೆ ಭಾರತಿ ಆಗಲೂರು ಮಾತನಾಡಿ, ಮಹಿಳಾ ಮೀಸಲು ಮಸೂದೆಯಿಂದ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ವಿರೋಧಿಸಿದ್ದು, ಮುಂದಿನ ಚುನಾವಣೆಯಲ್ಲಿ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ನಗರಸಭೆ ಮಾಜಿ ಸದಸ್ಯರಾದ ಮನೋಹರಗೌಡ ಹೇರೂರು, ಮೌಲಸಾಬ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರತ್ನಕುಮಾರಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಡಿ.ಕೆ.ಆಗೋಲಿ, ಯಮನೂರ ಚೌಡ್ಕಿ, ಪ್ರಸಾದ ಹಲ್ಟಿ, ಸೌಭಾಗ್ಯ, ಶಾಹೀನ್ ಕೌಸರ್, ಶಕುಂತಲಾ ಕಲ್ಲೂರ್, ಲಲಿತಾ ನಾಗರಾಜ್, ಹುಲಿಗೆಮ್ಮ ನಾಯಕ, ರೇಖಾ ರಾಯಭಾಗಿ, ಅರ್ಜುನ ನಾಯಕ, ಹೊಸ್ಮಲಿ ರಮೇಶ ಇತರರಿದ್ದರು.