ಗಂಗಾವತಿಯಲ್ಲಿ ಬಿಇಒ ಎಸ್.ಎಚ್.ನಟೇಶ ಅವರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕನಕಗಿರಿ ತಾಲೂಕು ಘಟಕದ ಸಂಚಾಲಕ ನೀಲಕಂಠ ಬಡಿಗೇರ್, ಪದಾಧಿಕಾರಿಗಳಾದ ಪಾಮಣ್ಣ ಅರಳಿಗನೂರು, ಸಣ್ಣ ಹನುಮಂತಪ್ಪ ಹುಲಿಹೈದರ್, ವೀರೇಶ, ಸುರೇಶ ಮಾನಳ್ಳಿ ಇತರರಿದ್ದರು.
- ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ
ಗಂಗಾವತಿ: ಎಸ್‌ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸ ಯೋಜನೆ ನಿರ್ಲಕ್ಷಿಸಿದ ಶಾಲಾ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ನಗರದ ಬಿಇಒ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಕನಕಗಿರಿ ತಾಲೂಕು ಘಟಕದ ಸಂಚಾಲಕ ನೀಲಕಂಠ ಬಡಿಗೇರ್ ಮಾತನಾಡಿ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ದರ್ಶನ ಯೋಜನೆ ಜಾರಿಗೆ ತಂದಿದ್ದು, ಆದರೆ ಬಹುತೇಕ ಶಾಲೆಗಳಲ್ಲಿ ಯೋಜನೆ ಅನುಷ್ಠಾನಗೊಂಡಿಲ್ಲ. ಅದರಲ್ಲೂ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇದುವರಿಗೂ ಯೋಜನೆ ರೂಪಿಸಿಲ್ಲ. ಉದ್ದೇಶ ಪೂರ್ವಕವಾಗಿ ಕೆಲ ಶಾಲೆ-ಕಾಲೇಜುಗಳು ಪ್ರವಾಸ ಭಾಗ್ಯವನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಯೋಜನೆ ಅನುಷ್ಠಾನದ ಬಗ್ಗೆ ಮೇಲಧಿಕಾರಿಗಳು ಕರೆದ ಸಭೆಗೂ ಕೆಲ ಶಾಲೆ ಮುಖ್ಯಸ್ಥರು ಭಾಗವಹಿಸಿಲ್ಲ. ಯೋಜನೆ ವಿಚಾರಿಸಿದ ವಿದ್ಯಾರ್ಥಿಗಳಿಂದ ಬಲವಂತದಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಿಇಒ ಎಸ್.ಎಚ್.ನಟೇಶ ಅವರಿಗೆ ಸಲ್ಲಿಸಿದರು.
ಪದಾಧಿಕಾರಿಗಳಾದ ಕೃಷ್ಣಮೂರ್ತಿ ಸಂಗಾಪುರ, ರಮೇಶ ಡಣಾಪುರ, ಚಿದಾನಂದಪ್ಪ ಡಣಾಪುರ, ಬಸವರಾಜ ಮಲ್ಲಾಪುರ, ಶರಣಪ್ಪ ಸಿದ್ದಾಪುರ, ದೇವರಾಜ, ಸುರೇಶ ಮಾನಳ್ಳಿ ಇತರರಿದ್ದರು.