ಗಂಗಾವತಿ ತಾಲೂಕಿನ ಹಿರೇಬೆಣಕಲ್‌ನ ಪ್ರಾಗೈತಿಹಾಸಿಕ ತಾಣ ಮೋರೆರ್ ಬೆಟ್ಟಕ್ಕೆ ಡಿಸಿ ಡಾ.ಸುರೇಶ ಬಿ.ಇಟ್ನಾಳ್ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು. ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ಪ್ರಮುಖರಾದ ವೀರೇಶ ಅಂಗಡಿ, ಮಂಜುನಾಥ ದೊಡ್ಮನಿ, ಚಂದ್ರು ಕುಂಬಾರ್ ಇತರರಿದ್ದರು.
ಗಂಗಾವತಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗುತ್ತಿದ್ದು, ರಸ್ತೆ ಸಂಪರ್ಕ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಡಿಸಿ ಡಾ.ಸುರೇಶ ಬಿ.ಇಟ್ನಾಳ್ ಹೇಳಿದರು.
ತಾಲೂಕಿನ ಹಿರೇಬೆಣಕಲ್‌ನ ಪ್ರಾಗೈತಿ ಹಾಸಿಕ ತಾಣ ಮೋರೆರ್ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು. ಮೊದಲ ಹಂತದಲ್ಲಿ 80ಲಕ್ಷ ರೂ.ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯ ಕಾಮಗಾರಿಗಳಿಗಾಗಿ ಕ್ರೀಯಾ ಯೋಜನೆ ರೂಪಿಸುವಂತೆ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗೆ ತಿಳಿಸಿದ್ದು, ಮುಂದಿನ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ವೀಕ್ಷಣೆ
ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬೆಟ್ಟ ಹತ್ತಿದ ಡಿಸಿ ಡಾ.ಸುರೇಶ ಬಿ.ಇಟ್ನಾಳ್, ಶಿಲಾಸಮಾಧಿ, ಕಲ್ಲಾಸರೆಯ ಚಿತ್ರಗಳು, ಗವಿಗಳನ್ನು ವೀಕ್ಷಿಸಿ, ನವ ಶಿಲಾಯುಗ ಮತ್ತು ಕಬ್ಬಿಣಯುಗದ ನೆಲೆಗಳ ಕುರಿತು ಮಾಹಿತಿ ಪಡೆದುಕೊಂಡರು. ಬೆಟ್ಟದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿ ಮತ್ತು ಮೂಲ ಸೌಲಭ್ಯಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು. ರಸ್ತೆ ಅಭಿವೃದ್ಧಿಗೆ ಅಗತ್ಯಬಿದ್ದರೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ಕಂದಾಯ ಸಿಬ್ಬಂದಿಗೆ ಸೂಚಿಸಿದರು.
ಮನವಿ ಸಲ್ಲಿಕೆ
ಬೆಟ್ಟ ಸಂಪರ್ಕದ ರಸ್ತೆ ನಿರ್ಮಾಣ, ಮೂಲ ಸೌಲಭ್ಯ ಒದಗಿಸುವುದು, ವಾಹನ ಪಾರ್ಕಿಂಗ್, ರೋಪ್‌ವೇ, ಹೆಲಿಟೂರಿಸಂ ಸೇರಿ ಇತರೆ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಮತ್ತು ಚಾರಣ ಬಳಗದ ಸದಸ್ಯರು ಡಿಸಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಎಚ್.ಎಸ್.ಮುರಳೀಧರ್, ಡಿಎ್ಒ ನಿರ್ಮಲಾ, ಪ್ರಭಾರ ತಹಸೀಲ್ದಾರ್ ವಿಶ್ವನಾಥಮುರಡಿ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ಪ್ರಮುಖರಾದ ಬಸನಗೌಡ ಹೊಸಳ್ಳಿ, ಹುಸೇನ್‌ಬಾಷಾ ಇತರರಿದ್ದರು.