ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂನಲ್ಲಿ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಹಜರತ್ ಹುಸೇನ್ ಉದ್ಘಾಟಿಸಿದರು. ಯೋಜನಾಧಿಕಾರಿ ಡಾ.ಹುಲುಗಪ್ಪ, ಗ್ರಾಪಂ ಅಧ್ಯಕ್ಷೆ ಹನುಮವ್ವ ವಡ್ರಕಲ್, ಉಪಾಧ್ಯಕ್ಷೆ ಮಲ್ಲಮ್ಮ ಮಾಮಳ್ಳಿ ಇತರರಿದ್ದರು. 
ಕೊಪ್ಪಳ

ದಾಖಲೆ ಸಲ್ಲಿಸಿ ಸೌಲಭ್ಯ ಪಡೆಯಿರಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಹೇಳಿಕೆ
  • ಗ್ರಾಪಂಗಳ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
  • ಫಲಾನುಭವಿಗಳ ಜತೆಗಿನ ಸಂವಾದ ಕಾರ್ಯಕ್ರಮ
ಕನಕಗಿರಿ: ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ಚೀಟಿಗಳು ಬದಲಾವಣೆಯಾಗುತ್ತಿವೆ. ಅರ್ಹ ಫಲಾನುಭವಿಗಳು ಆತಂಕ ಪಡದೇ ಅಗತ್ಯ ದಾಖಲೆ ಸಲ್ಲಿಸಿದಲ್ಲಿ ಮುಂದುವರಿಯಲಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿಕ್ಕಮಾದಿನಾಳ, ಮುಸಲಾಪುರ, ಬಸರಿಹಾಳ ಗ್ರಾಪಂಗಳ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜತೆಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ತಾಲೂಕಿನಾದ್ಯಂತ ಸಾಕಷ್ಟು ಫಲಾನುಭವಿಗಳ ಪಡಿತರ ಚೀಟಿಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಕನ್ವರ್ಟ್ ಆಗುತ್ತಿರುವುದು ಕಂಡುಬಂದಿದ್ದು, ಅಂತಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆಹಾರ ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ, ಸದರಿ ಪಡಿತರ ಚೀಟಿಯನ್ನು ಮೊದಲಿನಂತೆ ಬಿಪಿಎಲ್‌ಗೆ ಬದಲಾವಣೆ ಮಾಡಿಕೊಂಡು ಉಚಿತವಾಗಿ ಪಡಿತರ ಪಡೆಯಬಹುದು ಎಂದರು.
ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಸದರಿ ಯೋಜನೆಯ ಅನುಷ್ಠಾನದಲ್ಲಿ ಇರುವ ತಾಂತ್ರಿಕ ಸಮಸ್ಯೆ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಿಯಾದರೂ ಈ ಯೋಜನೆಗಳಿಂದ ಹೊರಗುಳಿದ ಫಲಾನುಭವಿಗಳು ಇದ್ದರೇ ಅಂತಹವರನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ತಿಳಿಸಿದರು.
ಯೋಜನಾಧಿಕಾರಿ ಡಾ.ಹುಲುಗಪ್ಪ, ಚಿಕ್ಕಮಾದಿನಾಳ ಗ್ರಾಪಂ ಅಧ್ಯಕ್ಷೆ ಹನುಮವ್ವ ವಡ್ರಕಲ್, ಉಪಾಧ್ಯಕ್ಷೆ ಮಲ್ಲಮ್ಮ ಮಾಮಳ್ಳಿ, ಅನುಷ್ಠಾನ ಸಮಿತಿ ಸದಸ್ಯರಾದ ಜಗದೀಶ್ ರಾಥೋಡ್, ನೀಲಕಂಠ ಬಡಿಗೇರ್, ಜಗದೀಶ್ ಚನ್ನವೀರಪ್ಪ, ಹನುಮಮ್ಮ ಪಾಟೀಲ್, ಗ್ಯಾನಪ್ಪ, ಭೀಮೇಶ, ವೀರೇಶ, ಯಮನೂರಪ್ಪ, ಚನ್ನಬಸಪ್ಪ, ಕನಕಪ್ಪ ಪಿಡಿಒ ಬಸವರಾಜ ಸಂಕನಾಳ, ತಾಪಂ ವಿಷಯ ನಿರ್ವಾಹಕ ಕೊಟ್ರಯ್ಯ ಸ್ವಾಮಿ ಇತರರಿದ್ದರು.