ಗಂಗಾವತಿಯಲ್ಲಿ ಪ್ರತಿಷ್ಠಾಪಿಸಿದ್ದ ಪೀರಲು ದೇವರುಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಶುಕ್ರವಾರ ಬೀಳ್ಕೊಡಲಾಯಿತು. 
ಕೊಪ್ಪಳ

60ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ

ಗಂಗಾವತಿ: ಮೊಹರಂ ಹಬ್ಬದ ನಿಮಿತ್ತ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಪೀರಲು ದೇವರುಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಶುಕ್ರವಾರ ಬೀಳ್ಕೊಡಲಾಯಿತು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ 60ಕ್ಕೂ ಹೆಚ್ಚು ಪೀರಲು ದೇವರುಗಳನ್ನು ಪ್ರತಿಷ್ಟಾಪಿಸಿದ್ದು, ಎಪಿಎಂಸಿ ಹಮಾಲರ ಕಾಲನಿ ಮತ್ತು ವಿರುಪಾಪುರ ತಾಂಡಾದಲ್ಲಿ ಅಲಾಯಿಗಳ ಪ್ರತಿಷ್ಠಾಪನೆ ನಿಷೇಧಿಸಲಾಗಿತ್ತು. ಅಣ್ಣಿಗೇರಿ, ಕಂದಗಲ್ ಓಣಿ, ಮುಜಾವರ ಕ್ಯಾಂಪ್, ಬಸವಣ್ಣ ವೃತ್ತ, ಇಸ್ಲಾಂಪುರ, ಸಿಹಿನೀರಿನ ಬಾವಿ ಸೇರಿ ನಗರದ 33 ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಪೀರಲ ದೇವರುಗಳನ್ನು ಪಂಜು, ತಾಷೆ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು.
ಬಸವಣ್ಣ ವೃತ್ತದ ವಿವಿಧ ಭಾಗದಿಂದ ಬಂದಿದ್ದ ಪೀರಲ ದೇವರುಗಳ ಸಮಾಗಮಕ್ಕೆ ನಗರದ ಜನತೆ ಸಾಕ್ಷಿಯಾಗಿದ್ದು, ಹೆಜ್ಜೆ ಮೇಳದೊಂದಿಗೆ ಸಂಭ್ರಮಿಸಿದರು. ಜಾಮೀಯಾ ಮಸೀದಿ ಬಳಿ ಸಂಪ್ರದಾಯಸ್ತ ಮುಸ್ಲಿಂ ಯುವಕರ ಗುಂಪು ಇಸ್ಲಾಂ ಧರ್ಮ ಮತ್ತು ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ತಾಲೂಕಿನ ಢಣಾಪುರದಲ್ಲೂ ಪೀರಲು ದೇವರುಗಳ ಅದ್ದೂರಿ ಮೆರವಣಿಗೆ ನಡೆಯಿತು. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಅಲಾಯಿ ಕುಣಿತ ಗಮನಸೆಳೆಯಿತು. ಹಲಗೆ ಮೇಳ, ಹಗಲು ವೇಷಧಾರಿಗಳು ಮತ್ತು ಹೆಜ್ಜೆ ಮೇಳಗಳು ಸಾಥ್ ನೀಡಿದವು. ತಾಲೂಕಿನ ವಡ್ಡರಹಟ್ಟಿಯಲ್ಲೂ ಅಲಾಯಿಗಳ ಮೆರವಣಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು.