ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಕೊಪ್ಪಳದ ಜೆಸ್ಕಾಂ ಕಚೇರಿ ಎದುರು ನೌಕರರು ಪ್ರತಿಭಟನೆ ನಡೆಸಿದರು. ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಗಾಯಕ್ವಾಡ್, ಕೇಂದ್ರ ಸಮಿತಿ ಸದಸ್ಯ ಅನಾಳಪ್ಪ, ಕಲ್ಯಾಣ ಸಂಸ್ಥೆಯ ಹನುಮಂತಪ್ಪ ಹುನಗುಂದ, ಹನುಮಂತಪ್ಪ ಹಾದಿಮನಿ ಇತರರಿದ್ದರು. 
ಕೊಪ್ಪಳ

ವಿದ್ಯುತ್ ಇಲಾಖೆ ಖಾಸಗೀಕರಣದಿಂದ ರೈತರಿಗೆ ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಪ್ರಸರಣ ನಿಗಮ ನೌಕರರ ಒಕ್ಕೂಟ ಒತ್ತಾಯ
  • ಪ್ರತಿಭಟನೆ
ಕೊಪ್ಪಳ: ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಒಕ್ಕೂಟದ ನೇತೃತ್ವದಲ್ಲಿ ನೌಕರರು ನಗರದ ಜೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದು ಖಂಡನೀಯ. ಇಂಧನ ಇಲಾಖೆ ಸಾರ್ವಜನಿಕರ ಆಸ್ತಿ. ಇದನ್ನು ಖಾಸಗೀಕರಣ ಗೊಳಿಸಲು 2026ರ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಯ ಬಿಲ್ ಪಾಸ್ ಮಾಡಲು ಹೊರಟಿದೆ. ವಿದ್ಯುತ್ ಇಲಾಖೆಯು ಹಲವು ನೌಕರರು ಪ್ರಾಣಕೊಟ್ಟು ಕಷ್ಟಪಟ್ಟು ಕಟ್ಟಿರುವ ಬೃಹತ್ ಸಂಸ್ಥೆ. ಇದನ್ನು ಖಾಸಗೀಕರಣ ಮಾಡಬಾರದು. ಮಾಡಿದರೆ, ಲಕ್ಷಾಂತರ ಕುಟುಂಬಗಳ ಬದುಕು ಬೀದಿಗೆ ಬರಲಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿದ್ಯುತ್ ಅಥವಾ ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡಿದರೆ, ಅನ್ನದಾತರಿಗೆ ಅನ್ಯಾಯ ಆಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೂ ಮೀಟರ್ ಅಳವಡಿಸಬೇಕಾಗುತ್ತದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಬಿಲ್ ಸಾವಿನ ದವಡೆಗೆ ತಳ್ಳಲಿದೆ. ಭಾಗ್ಯಜ್ಯೋತಿ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಸ್ಥಗಿತ ಗೊಳಿಸಲಾಗುತ್ತದೆ. ಇದರಿಂದ ಗ್ರಾಹಕಕರು ಕಡ್ಡಾಯವಾಗಿ ವಿದ್ಯುತ್ ಶುಲ್ಕ ಭರಿಸಬೇಕಾಗುತ್ತದೆ. ಹೀಗಾಗಿ ಖಾಸಗೀಕರಣ ಬೇಡ ಎಂದರು.
ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಡಾ.ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಗಾಯಕ್ವಾಡ್, ಕೇಂದ್ರ ಸಮಿತಿ ಸದಸ್ಯ ಅನಾಳಪ್ಪ, ಕಲ್ಯಾಣ ಸಂಸ್ಥೆಯ ಹನುಮಂತಪ್ಪ ಹುನಗುಂದ, ಹನುಮಂತಪ್ಪ ಹಾದಿಮನಿ, ಕೊಪ್ಪಳ ವೃತ್ತದ ಅಧೀಕ್ಷಕ ಅಭಿಯಂತರ ರಮೇಶ ಎಂ., ಕಾರ್ಯನಿರ್ವಾಹಕ ಅಭಿಯಂತರ ಮೋಟ್ಲಾನಾಯಕ್, ಪಣಿರಾಜೇಶ, ಪ್ರಮುಖರಾದ ಆನಂದಕುಮಾರ ಎಂ., ಬಿ.ವೆಂಕಟೇಶ, ಬಿ.ಆರ್.ದೇಸಾಯಿ, ಪವಿತ್ರಾ, ಬಿ.ಎಂ.ಮಹಾಂತೇಶ, ಗಿರೀಶ ಎಂ., ರಾಜೇಶ ಎ.ಎಂ., ನಾಗೇಂದ್ರ, ಶ್ರೀಧರ ಹಿರೇಗೌಡ್ರು, ಶೈಲಜಾ, ಯುನೂಸ್ ಖಾನ್ ಇದ್ದರು.