ಹುಲಿಗಿ ಗ್ರಾಮದಲ್ಲಿ ಕೆಪಿಎಂಇ ಕಾಯ್ದೆಯಡಿ ನವೀಕರಣಗೊಳ್ಳದೇ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕ್ಲಿನಿಕ್ ಹಾಗೂ ಲ್ಯಾಬ್ ಅನ್ನು ತಾಲೂಕು ಆರೋಗ್ಯಾಧಿಕಾರಿಗಳ ತಂಡ ಸೀಜ್ ಮಾಡಿರುವುದು. 
ಕೊಪ್ಪಳ

ನವೀಕರಣಗೊಳ್ಳದ ಖಾಸಗಿ ಕ್ಲಿನಿಕ್ ಸೀಜ್

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಆರೋಗ್ಯಾಧಿಕಾರಿಗಳ ತಂಡದಿಂದ ದಿಢೀರ್ ದಾಳಿ
ಮುನಿರಾಬಾದ್: ಸಮೀಪದ ಹುಲಿಗಿ ಗ್ರಾಮದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಡಿ ನವೀಕರಣಗೊಳ್ಳದೇ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕ್ಲಿನಿಕ್ ಹಾಗೂ ಲ್ಯಾಬ್‌ಗಳ ಮೇಲೆ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಸೋಮವಾರ ದಿಢೀರ್ ದಾಳಿ ನಡೆಸಿ ಸೀಜ್ ಮಾಡಿದೆ.
ಕೊಪ್ಪಳ ಜಿಲ್ಲಾದ್ಯಂತ ಅನಧಿಕೃತವಾಗಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್, ನಸಿರ್ಂಗ್ ಹೋಮ್ ಹಾಗೂ ಲ್ಯಾಬ್‌ಗಳನ್ನು ತಕ್ಷಣ ಮುಚ್ಚಿಸಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಆದೇಶಿಸಿದ್ದರು. ಅಲ್ಲದೇ ಹುಲಿಗಿ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃತ ನೋಂದಣಿ ಇಲ್ಲದೆ ಕ್ಲಿನಿಕ್ ಮತ್ತು ಲ್ಯಾಬ್‌ಗಳನ್ನು ನಡೆಸುತ್ತಾ, ಸಾರ್ವಜನಿಕರ ಜೀವದ ಜತೆ ಚೆಲ್ಲಾಟ ಆಡುತ್ತಿರುವುದು ಬೆಳಕಿಗೆ ಬಂದಿತ್ತು.
ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜ್ ಮಾತನಾಡಿ, ಖಾಸಗಿ ವೈದ್ಯಕೀಯ ಸಂಸ್ಥೆಗಳು ಗುಣಮಟ್ಟದ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ರೋಗಿಗಳ ಸುರಕ್ಷತೆ ಕಾಯ್ದುಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶ. ಕೆಪಿಎಂಇ ಕಾಯ್ದೆಯಡಿ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಹಾಗೂ ನವೀಕರಣ ಮಾಡಿಕೊಳ್ಳಬೇಕು. ಹುಲಿಗಿ ಗ್ರಾಮದ ಕೆಲವು ಕ್ಲಿನಿಕ್ ಹಾಗೂ ಲ್ಯಾಬ್‌ಗಳ ವಿರುದ್ಧ ದೂರು ಬಂದಿದ್ದವು. ಜಿಲ್ಲಾಧಿಕಾರಿ ಆದೇಶದನ್ವಯ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದ ಒಂದು ಖಾಸಗಿ ಕ್ಲಿನಿಕ್ ಹಾಗೂ 1 ಲ್ಯಾಬ್ ಸೀಜ್ ಮಾಡಲಾಗಿದೆ. ದೂರುಗಳು ಬಂದರೆ ಜಿಲ್ಲೆಯ ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲೂಕು ಆರೋಗ್ಯಾಧಿಕಾರಿಗಳ ತಂಡ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.