ಸಿದ್ದಾಪುರ ಸಮೀಪದ ಕಕ್ಕರಗೋಳದ ಮೃತರ ನಿವಾಸಕ್ಕೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ಧನದ ಆದೇಶ ಪ್ರತಿ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಬಸವರಾಜಪ್ಪ ಬಜಾರ್, ಜನಗಂಡೆಪ್ಪ ಪೂಜಾರ್ ಇತರರಿದ್ದರು.
- ಸಚಿವ ಶಿವರಾಜ ತಂಗಡಗಿ ಭರವಸೆ
- ಸಿದ್ದಾಪುರ ಕಕ್ಕರಗೋಳ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ
ಸಿದ್ದಾಪುರ: ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದು ಮೂವರ ಮೃತಪಟ್ಟ ಘಟನೆ ದುರದೃಷ್ಟಕರ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕಕ್ಕರಗೋಳದ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗುಡ್ಡ ಕುಸಿತದಲ್ಲಿ ಮಲ್ಲಿಕಾರ್ಜುನ, ನಾಗವೇಣಿ ಹಾಗೂ ಮಗು ಸಂತೋಷ್ ಮೃತಪಟ್ಟಿದ್ದು, ಹನುಮಂತಪ್ಪ ಎನ್ನುವವರು ಗಾಯಗೊಂಡಿದ್ದಾರೆ. ಮೃತ ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ಮನೆಯವರೇ ನಿಭಾಯಿಸಿದರೆ ಸರಿ. ಇಲ್ಲವಾದರೆ ಬಾಲಮಂದಿರದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆದ್ಯತೆ ನೀಡಲಾಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥರಿಗೆ ವಿಪತ್ತು ನಿರ್ವಹಣಾ ಖಾತೆಯಿಂದ 15ಲಕ್ಷ ರೂ. ಪರಿಹಾರ ನೀಡಲಾಗಿದೆ. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಇನ್ನೂ ಪ್ರಾಯೋಜಕತ್ವದಡಿ ಒಬ್ಬ ಮಗುವಿಗೆ ಮೂರು ವರ್ಷಗಳ ಕಾಲ ಮಾಸಿಕ 4 ಸಾವಿರ ರೂ. ವಿತರಿಸಲಾಗುವುದು. ಸರ್ಕಾರದಿಂದ ಇತರ ಸೌಲಭ್ಯಗಳು ದೊರೆಯುವುದಿದ್ದರೆ ಕಲ್ಪಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತಹಸೀಲ್ದಾರ್ ಎಂ.ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಂಧು ಎಲಿಗಾರ್, ಶರಣಪ್ಪ ಗೌರಿಪುರ, ಡಿಡಿಪಿಐ ಸೋಮಶೇಖರ್ ಗೌಡ, ಬಿಇಒ ನಟೇಶ್, ಪ್ರಮುಖರಾದ ಬಸವರಾಜಪ್ಪ ಬಜಾರ್, ಜನಗಂಡೆಪ್ಪ ಪೂಜಾರ್, ಶರಣಪ್ಪ ಸಾಹುಕಾರ್, ಗವಿಸಿದ್ದಪ್ಪ ನಾಯಕ, ಶರಣೇಗೌಡ, ಶಿವರೆಡ್ಡಿ ನಾಯಕ, ಚನ್ನಬಸಪ್ಪ ಸುಂಕದ್, ಪರಕಿ ಶರಣಪ್ಪ, ಹನುಮಂತಪ್ಪ ಶ್ಯಾಲಿಗನೂರು, ಈಶನಗೌಡ ಮಾಲಿಪಾಟೀಲ್ ಇತರರಿದ್ದರು.