ಅಳವಂಡಿ ಸಮೀಪದ ಬೆಟಗೇರಿಯಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು, ತೊಗರಿ ಬೀಜ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಯಲಗಾರ, ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬದರಿ ಪ್ರಸಾದ, ವಿಜ್ಞಾನಿ ಡಾ.ಮಲ್ಲೇಶ, ರೈತರು ಇದ್ದರು. 
ಕೊಪ್ಪಳ

ಸಮತೋಲಿತ ರಸಗೊಬ್ಬರ ಬಳಕೆಗೆ ಆದ್ಯತೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಯಲಿಗಾರ ಸಲಹೆ
  • ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು
ಅಳವಂಡಿ: ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಮತ್ತು ಗುಣಮಟ್ಟದ ಇಳುವರಿ ಪಡೆಯಲು ರೈತರು ಸಮತೋಲಿತ ರಸಗೊಬ್ಬರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ (ಕೆ.ವಿ.ಕೆ) ಮುಖ್ಯಸ್ಥ ಡಾ.ರಾಘವೇಂದ್ರ ಯಲಿಗಾರ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳ ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರ, ಕೃಷಿ ಇಲಾಖೆಯಿಂದ
ಸೋಮವಾರ ಹಮ್ಮಿಕೊಂಡಿದ್ದ ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು ಕಾರ್ಯಕ್ರಮ ಹಾಗೂ ರೈತರಿಗೆ ತೊಗರಿ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚಿನ ಇಳುವರಿಯ ಆಸೆಗೆ ಅತಿಯಾದ ರಾಸಾಯನಿಕ ಬಳಸಿದರೆ ಮಣ್ಣು ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ರಾಸಾಯನಿಕ ಗೊಬ್ಬರಗಳ ಜತೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಫಲವತ್ತತೆ ಹೆಚ್ಚಲಿದೆ ಎಂದರು.
ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬದರಿ ಪ್ರಸಾದ ಮಾತನಾಡಿ, ಸಮತೋಲಿತ ರಸಗೊಬ್ಬರ ಬಳಕೆಯಿಂದ ಅನಗತ್ಯ ಗೊಬ್ಬರದ ವೆಚ್ಚ ಕಡಿಮೆಯಾಗಿ, ರೈತರ ನಿವ್ವಳ ಆದಾಯ ಹೆಚ್ಚುತ್ತದೆ. ಮಣ್ಣು ಹೆತ್ತ ತಾಯಿಯಂತೆ. ಅದಕ್ಕೆ ಏನು ಬೇಕೋ ಅದನ್ನು ಮಾತ್ರ ಉಣಿಸಬೇಕು. ಬೇಕಾಬಿಟ್ಟಿ ರಾಸಾಯನಿಕ ಸುರಿದರೆ ಮುಂದಿನ ಪೀಳಿಗೆಗೆ ಬಂಜರು ಭೂಮಿ ಉಳಿಯಲಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಕೃಷಿ ಹೆಚ್ಚು ಲಾಭದಾಯಕ ಎಂದರು. ನಂತರ ರೈತರಿಗೆ ಬಿತ್ತನೆಗೆ ತೊಗರಿ ಬೀಜ ವಿತರಿಸಲಾಯಿತು.