ಕೊಪ್ಪಳದ ಬಾಲಕಿಯರ ಹಾಸ್ಟೆಲ್ಗೆ ಮಂಗಳವಾರ ಸಂಜೆ ಭೇಟಿ ನೀಡಿದ ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಕ್ಕಳೊಂದಿಗೆ ಆನ್ಲೈನ್ ಪಾಠ ಕೇಳಿದರು.
- ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ
- ಸ್ಫೂರ್ತಿ ನಡೆ ಕಾರ್ಯಕ್ರಮ
ಕೊಪ್ಪಳ: ವಸತಿ ನಿಲಯಗಳ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ವಾರ್ಡನ್ಗಳು ವಿಶೇಷ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನಡೆ ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 82 ಹಾಸ್ಟೆಲ್ಗಳಿವೆ. ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷೆ ಯಶಸ್ವಿಯಾಗಿ ಎದುರಿಸಲು ಸ್ಫೂರ್ತಿ ನಡೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿತ್ಯ ಸಂಜೆ 6-8ಗಂಟೆವರೆಗೆ ವಿಶೇಷ ಆನ್ಲೈನ್ ತರಗತಿ ಆಯೋಜಿಸಿ. ಅನುಭವಿ ಶಿಕ್ಷಕರಿಂದ ಬೋಧನೆ ಮಾಡಿಸಿ. ಕಠಿಣ ವಿಷಯಗಳ ಮಕ್ಕಳು ಪ್ರಶ್ನೆ ಕೇಳಿ ಪರಿಹಾರ ಪಡೆದುಕೊಳ್ಳುವಂತೆ ಮಾಡಿ. ಪರೀಕ್ಷೆ ಧೈರ್ಯವಾಗಿ ಎದುರಿಸುವ ಬಗೆ ಬಗ್ಗೆ ತಿಳಿಸಿ. ಸಂಬಂಧಿಸಿದ ಅಧಿಕಾರಿಗಳು ಹಾಗೂ ನಿಲಯ ಪಾಲಕರು ಈ ಬಗ್ಗೆ ಕ್ರಮವಹಿಸುವಂತೆ ತಾಕೀತು ಮಾಡಿದರು.
ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯ ಕುರಿತು ಪಾಠ ಬೋಧನೆಗೆ ಅವಕಾಶವಿದೆ. ಶಿಕ್ಷಕರಿಗೆ ಸರ್ಕಾರದಿಂದ ನಿತ್ಯ 300 ರೂ. ಗೌರವಧನ ಪಾವತಿಸಲಾಗುವುದು. ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ವಸತಿ ನಿಲಯದ ಮಕ್ಕಳು ಉತ್ತಮ ಫಲಿತಾಂಶ ಪಡೆಯುವಂತೆ ಮಾಡಿ. ಯಾವೊಬ್ಬ ವಿದ್ಯಾರ್ಥಿಯೂ ಅನುತ್ತೀರ್ಣ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಮಾತನಾಡಿ, ಪ್ರಥಮ ಹಂತದಲ್ಲಿ ಶೇ.52ರಷ್ಟು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆಗೆ ಆನ್ಲೈನ್ ಮೂಲಕ ಪ್ರಶ್ನೆ ಮಾದರಿ ಅನುಸರಿರಿ ಪೂರ್ವತಯಾರಿ ಪರೀಕ್ಷೆ ಮಾಡಿ ತರಬೇತಿ ನೀಡಿದ್ದೇವೆ. ಅದರಂತೆ ಕ್ರಮವಹಿಸುವುದಾಗಿ ಹೇಳಿದರು.
ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ನಾಗಮಣಿ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ ಅಲಿ, ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಇತರ ಅಧಿಕಾರಿಗಳಿದ್ದರು.
ಹಾಸ್ಟೆಲ್ಗೆ ಭೇಟಿ ನೀಡಿದ ಡಿಸಿ
ಕೊಪ್ಪಳದ ಡಾ.ಬಿ.ಆರ್.ಅಂಬೇಡ್ಕರ್ ಸರ್ಖಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಮಂಗಳವಾರ ಸಂಜೆ ಡಿಸಿ ಭೇಟಿ ನೀಡಿದರು. ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕಾ ಸಾಮರ್ಥ ಅಭಿವೃದ್ಧಿಗಾಗಿ ನಡೆಸುತ್ತಿರುವ ಆನಲೈನ್ ಕ್ಲಾಸನಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಿದರು. ತರಗತಿ ನಡೆವ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿನಿಯರ ಕುಂದು ಕೊರತೆ ವಿಚಾರಿಸಿದರು. ಮೆನುವಿನಂತೆ ಊಟ, ಇನ್ನಿತರ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಡಿಡಿಪಿಐ ಸೋಮಶೇಖರಗೌಡ ಪಾಟೀಲ್, ವಸತಿ ನಿಲಯ ಸಿಬ್ಬಂದಿ ಇದ್ದರು.