ಕೊಪ್ಪಳದಲ್ಲಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ ಇದ್ದರು.
- ಕುಡಿವ ನೀರು ಸಮಸ್ಯೆಗೆ ಸ್ಪಂದಿಸಿ
- ಸಚಿವ ಶರಣಪ್ರಕಾಶ್ ಪಾಟೀಲ್ ಸೂಚನೆ
- ಅಧಿಕಾರಿಗಳೊಂದಿಗೆ ಸಭೆ
ಕೊಪ್ಪಳ : ತೀವ್ರ ಮಳೆ ಕೊರತೆ ಕಾರಣ ಬರ ಪರಿಸ್ಥಿತಿ ಎದುರಾಗಿದೆ. ಮುಂದೆ ಮಳೆ ಆಗದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ವೈದ್ಯಕಿಯ ಶಿಕ್ಷಣ, ವಿಪತ್ತು ನಿರ್ವಹಣೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಕೊಪ್ಪಳದಲ್ಲೂ ಅದೇ ಪರಿಸ್ಥಿತಿ ಇದೆ. ಬರ ಘೋಷಣೆ ಆದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಸರ್ಕಾರ ಅದಕ್ಕೆ ಸಿದ್ಧವಾಗಿದೆ. ಜಿಲ್ಲಾ ಮಟ್ಟದಲ್ಲಿ ಎಲ್ಲ ಅಧಿಕಾರಿಗಳು ನಿಮ್ಮ ಜವಾಬ್ದಾರಿ ನಿರ್ವಹಿಸಿ. ಕೃಷಿ, ಕುಡಿವ ನೀರು, ಮೇವು ಲಭ್ಯತೆ ನೋಡಿಕೊಳ್ಳಿ. ಜನರಿಗೆ ಕೆಲಸ ನೀಡಬೇಕಾದ ಕಾರಣ ಗ್ರಾಪಂವಾರು ಕ್ರಿಯಾಯೋಜನೆ ರಚಿಸಿಕೊಳ್ಳಿ. ವಿಬಿಜಿ ರಾಮ್ಜಿ ಯೋಜನೆಯಡಿ ಕೂಲಿ ಕೆಲಸ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತನ್ನಿ ಎಂದು ನಿರ್ದೇಶಿಸಿದರು.
ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಶೇ.47ರಷ್ಟು ಬಿತ್ತನೆಯಾಗಿದೆ. ಶೇ.31ರಷ್ಟು ಮಳೆ ಕೊರತೆಯಾಗಿದೆ. ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ, ಸೂರ್ಯಕಾಂತಿ, ಹತ್ತಿ ಬಿತ್ತನೆಯಾಗಿದೆ. 10&15 ದಿನಗಳಿಂದ ಮಳೆ ಆಗದ ಕಾರಣ ತೇವಾಂಶ ಕೊರತೆಯಿಂದ ಬಾಡುತ್ತಿವೆ. ರೈತರು ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ರಸಗೊಬ್ಬರ ಬದಲು ಸಾವಯವ ಗೊಬ್ಬರಕ್ಕೆ ಆದ್ಯತೆ ನೀಡಲು ಮನವಿ ಮಾಡುತ್ತಿರುವುದಾಗಿ ವಿವರಿಸಿದರು.
ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ ಮಾತನಾಡಿ, ಜಿಲ್ಲಾದ್ಯಂತ ಸದ್ಯ 56 ವಾರಗಳಗೆ ಬೇಕಾಗುವಷ್ಟು ಮೇವಿದೆ. ಕೊಪ್ಪಳ ತಾಲೂಕಿನಲ್ಲಿ 25 ವಾರ, ಕುಷ್ಟಗಿ 27, ಕನಕಗಿರಿ 38 ವಾರಕ್ಕೆ ಆಗುವಷ್ಟಿದೆ. ನೀರಾವರಿ ಸೌಲಭ್ಯ ಇರುವ ರೈತರಿಗೆ ಮೇವಿನ ಕಿಟ್ ನೀಡುತ್ತಿದ್ದೇವೆಂದರು.
ಮುಂಗಾರು&ಹಿಂಗಾರು ಮಳೆ ಕೈ ಕೊಟ್ಟರೆ ಮೇವಿನ ಸಮಸ್ಯೆ ಆಗಬಹುದು. ಹೀಗಾಗಿ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಿ. ಮೇವಿನ ಲಭ್ಯತೆ, ಭವಿಷ್ಯಕ್ಕೆ ಬೇಕಾದ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಬರ ಎದುರಿಸಲು ತಯಾರಿ
ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಗ್ರಾಮೀಣ ಭಾಗದಲ್ಲಿ 37ಗ್ರಾಮಗಳಲ್ಲಿ ಕುಡಿವ ನೀರು ಸಮಸ್ಯೆಯಾಗಿದೆ. 47 ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಹೊಸ ಕೆರೆ ನಿರ್ಮಾಣ, ಡ್ರಿಪ್ ಅಳವಡಿಕೆ, ಹೂಳು ತೆರವು, ಚೆಕ್ಡ್ಯಾಂ ನಿರ್ಮಿಸುವುದು ಸೇರಿ, ಲಭ್ಯವಾಗುವ ನೀರು ಹಿಡಿದಿಡಲು ಯೋಜನೆ ರೂಪಿಸುತ್ತಿದ್ದೇವೆ. ರೈತರಿಗೂ ಪರ್ಯಾಯ ಬೆಳೆ ಬೆಳೆಯಲು ಸೂಚಿಸಲಾಗಿದೆ. ಸಿಡಿಲಿನಿಂದ ನಾಲ್ವರು ಮೃತರಾಗಿದ್ದು, ಪರಿಹಾರ ನೀಡಲಾಗಿದೆ. 24 ರೈತ ಆತ್ಮಹತ್ಯೆಯಾಗಿದ್ದು, 23ರಲ್ಲಿಪರಿಹಾರ ನೀಡಿದ್ದೇವೆಂದು ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾಹಿತಿ ನೀಡಿದರು.
ಕುಡಿವ ನೀರು ಸಮಸ್ಯೆ ಇದೆ
ಕುಷ್ಟಗಿ, ಯಲಬುರ್ಗಾ ತಾಲೂಕಿನ ಕೆಲವೆಡೆ ಕುಡಿವ ನೀರಿನ ಸಮಸ್ಯೆ ಇದೆ. ಜೆಜೆಎಂ ಯೋಜನೆ ಪೈಪ್ ಲೈನ್ನಲ್ಲಿ ನೀರು ಬರುತ್ತಿಲ್ಲ. ಕಳಪೆ ಕೆಲಸವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ. 23 ಗ್ರಾಮಗಳಿಗೆ ಬಜೆಟ್ನಲ್ಲಿ 125 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಿಸಬೇಕೆಂದು ಶಾಸಕ ಬಸವರಾಜ ರಾಯರಡ್ಡಿ ಸಚಿವರಿಗೆ ಮನವಿ ಮಾಡಿದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆಯಾಗಿದೆ. ಬೋರ್ವೆಲ್ ಕೊರೆಸಲು ಅನುದಾನವಿಲ್ಲವೆನ್ನುತ್ತಿದ್ದಾರೆಂದರು. ಜಿಪಂ ಸಿಇಒ 4 ಕೋಟಿ ರೂ. ಅನುದಾನವಿದೆ. ಮೊದಲ ಆದ್ಯತೆ ಖಾಸಗಿ ಬೋರ್ವೆಲ್ ಪಡೆಯುವುದಕ್ಕೆ ಎಂದರು. ಅಗತ್ಯವಿದ್ದಲ್ಲಿ ಬೋರ್ವೆಲ್ ಕೊರೆಸುವಂತೆ ಸಚಿವರು ಸೂಚಿಸಿದರು.
ಸಿಇಗೆ ತರಾಟೆ
ಮುನಿರಾಬಾದ್ ನೀರಾವರಿ ನಿಗಮದ ಸಿಇ ಎಸ್.ಬಿ.ಮಲ್ಲಿಗೇವಾಡ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ 9.30ಟಿಎಂಸಿ ನೀರಿದೆ. 2 ಟಿಎಂಸಿ ಡೆಡ್ ಸ್ಟೋರೇಜ್ ಬಿಡಬೇಕಿದೆ. ಬಾಕಿ ನೀರು ಕುಡಿವ ನೀರು ಯೋಜನೆಗೆ ಬಳಸಲು ಸರ್ಕಾರ ಸೂಚಿಸಿದೆ ಎಂದರು. ರಾಯಚೂರಿಗೆ ನೀರು ಬಿಡುವಂತೆ ಸಚಿವರು ತಿಳಿಸಿದರು. ಮೈಲ್ 47ರಲ್ಲಿ ಹೊಸ ಸೇತುವೆ ಕೆಲಸವಿದ್ದು, 15 ದಿನ ಆಗುವುದಿಲ್ಲವೆಂದು ಅಧಿಕಾರಿ ತಿಳಿಸಿದರು. ಬರ ಪರಿಸ್ಥಿತಿ ಇದೆ. ಕುಡಿವ ನೀರು ಅವಶ್ಯ. ಈ ಸಮಯದಲ್ಲಿ ಕಾಮಗಾರಿ ಯಾಕೆ ಮಾಡುತ್ತಿದ್ದೀರಿ ? ಈ ಬಗ್ಗೆ ಮೇಲಧಿಕಾರಿಗಳಿಗೆ ಯಾಕೆ ತಿಳಿಸಿಲ್ಲವೆಂದು ತರಾಟೆ ತೆಗೆದುಕೊಂಡರು. ರಾಯಚೂರು ಡಿಸಿಗೆ ಕರೆ ಮಾಡಿ ಪರಿಸ್ಥಿತಿ ತಿಳಿದು ಜು.10ರೊಳಗೆ ನೀರು ಬಿಡುಗಡೆ ಮಾಡುವಂತೆ ತಾಕೀತು ಮಾಡಿದರು. ಸಭೆಗೆ ಬಾರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇಗೆ ನೋಟಿಸ್ ನೀಡಲು ಸಚಿವರು ನಿರ್ದೇಶಿಸಿದರು.
"
ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಜಾಸೇವೆ ಜನಸಂಪರ್ಕ ಸಭೆ ನಡೆಸಿ. ವಾರಕ್ಕೆ ಎರಡು ತಾಲೂಕುಗಳಲ್ಲಿ ಮಾಡಿ. ನಂತರ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಿ. ಯಾವ ರೀತಿ ಮಾಡಬೇಕೆಂಬ ಬಗ್ಗೆ ರಾಮನಗರ ಡಿಸಿ ಕಡೆಯಿಂದ ಫಾಮಾರ್ಟ್ ತರಿಸಿಕೊಳ್ಳಿ.
— ಡಾ.ಶರಣಪ್ರಕಾಶ ಪಾಟೀಲ್. ಸಚಿವ.