ಜಿಲ್ಲೆಯ ಹಿರೇಮನ್ನಾಪೂರು ಗ್ರಾಮದ ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಶಾಲೆಯ ಮುಂಭಾಗದ ರಸ್ತೆ ಬದಿ ಸ್ವಚ್ಛಗೋಳಿಸುತ್ತಿರುವುದು. 
ಕೊಪ್ಪಳ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತಾ ಕಾರ್ಯ ಆರಂಭ
ಕೊಪ್ಪಳ :ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸಲಿರುವ ಹಿರೇಮನ್ನಾಪೂರ ಗ್ರಾಮದಲ್ಲಿ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜು. 25 ಮತ್ತು 26 ರಂದು ನಡೆಯುವ ಸಮ್ಮೇಳನ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ವಿವಿಧ ಇಲಾಖೆಗಳು ಹಾಗೂ ಸ್ಥಳಿಯರು ಕೈಜೋಡಿಸಿದ್ದು, ಗ್ರಾಮವನ್ನು ಸಮ್ಮೇಳನಕ್ಕೆ ತಕ್ಕಂತೆ ಸಜ್ಜುಗೊಳಿಸುವ ಕಾರ್ಯ ಆರಂಭಗೊಂಡಿದೆ.
ಸಮ್ಮೇಳನ ನಡೆಯಲಿರುವ ಮುಖ್ಯ ವೇದಿಕೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ವೇದಿಕೆ ಆವರಣ, ಪ್ರವೇಶ ಮಾರ್ಗಗಳು, ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ತೆರವುಗೊಳಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಗ್ರಾಮಕ್ಕೆ ಆಗಮಿಸುವ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರೊಂದಿಗೆ ವೇದಿಕೆ ನಿಮಾರ್ಣ, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್​, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಗ್ರಾಮದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಸಮ್ಮೇಳನ ನಡೆಯುವ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಮ್ಮೇಳನವನ್ನು ಜಿಲ್ಲೆಯ ಸಾಂಸತಿಕ ವೈಭವಕ್ಕೆ ತಕ್ಕಂತೆ ಆಯೋಜಿಸಲು ಸ್ಥಳಿಯ ಸಂಘ-ಸಂಸ್ಥೆಗಳು, ಯುವಕರು ಹಾಗೂ ಗ್ರಾಮಸ್ಥರು ಸಹ ಉತ್ಸಾಹದಿಂದ ಕೈಜೋಡಿಸಿದ್ದಾರೆ. ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯುವಂತೆ ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮತ್ತು ಗ್ರಾಪಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಸಾಹಿತ್ಯಾಭಿಮಾನಿಗಳ ಬಹುನಿರೀಕ್ಷಿತ ಈ ಸಮ್ಮೇಳನಕ್ಕೆ ಹಿರೇಮನ್ನಾಪೂರ ಗ್ರಾಮ ಸಜ್ಜಾಗುತ್ತಿದ್ದು, ಸ್ವಚ್ಛತೆ, ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲು ಸಿದ್ಧತೆಗಳು ಅಂತಿಮ ಹಂತದತ್ತ ಸಾಗಿವೆ.