ಗಂಗಾವತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಶುಕ್ರವಾರ ಮಾತನಾಡಿದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್. ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಇತರರಿದ್ದರು.
- 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
- 2ರಂದು ಭೂಮಿಪೂಜೆ
- ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾಹಿತಿ
ಗಂಗಾವತಿ: ಜನಸಂಖ್ಯೆ ಮತ್ತು ಸೌಂದರ್ಯೀಕರಣ ದೃಷ್ಟಿಯಲ್ಲಿಟ್ಟುಕೊಂಡು ನಗರದ ಕನಕಗಿರಿ ರಸ್ತೆ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೃಷಿ ಇಲಾಖೆ ವ್ಯಾಪ್ತಿಯ 5 ಎಕರೆ ಪ್ರದೇಶದಲ್ಲಿ ಕಕ ಭಾಗದಲ್ಲಿಯೇ ಮಾದರಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ವಿಶೇಷ ಅನುದಾನ 18 ಕೋಟಿ ರೂ.ಮಂಜೂರಾಗಿದ್ದರೆ, ನಿಲ್ದಾಣದ ಸೌಂದರ್ಯೀಕರಣಕ್ಕಾಗಿ ಹೆಚ್ಚುವರಿ 2 ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ಇಲಾಖೆಯಿಂದ 5 ಎಕರೆ ಭೂಮಿ ಕೆಕೆಆರ್‌ಟಿಸಿಗೆ ಮಂಜೂರಾಗಿದ್ದು, ಪಹಣಿ ಬಂದಿದೆ. ಮೇ 2ರಂದು ಭೂಮಿಪೂಜೆ ನೆರವೇರಿಸಲಾಗುತ್ತಿದ್ದು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಳೇ ಬಸ್ ನಿಲ್ದಾಣವನ್ನು ಸಿಟಿ ಬಸ್‌ನಿಲ್ದಾಣವನ್ನಾಗಿ ಪರಿವರ್ತಿಸಲಾಗುತ್ತಿದ್ದು, ಹೊಸ ನಿಲ್ದಾಣದಿಂದ ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳನ್ನು ಸಿಟಿ ಬಸ್ ನಿಲ್ದಾಣದಿಂದಲೇ ಹೊರಡುವ ವ್ಯವಸ್ಥೆ ಮಾಡಲಾಗುವುದು. ಬಸ್ ನಿಲ್ದಾಣ ಪಕ್ಕದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ 5 ಎಕರೆ ಭೂಮಿಗಾಗಿ ಕೃಷಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈಲು ನಿಲ್ದಾಣದ ಆಧುನೀಕರಣಕ್ಕಾಗಿ ಅಮೃತಸಿಟಿ ಯೋಜನೆಯಡಿ 35 ಕೋಟಿ ರೂ.ಮಂಜೂರಾಗಿದೆ. ಅಂಜನಾದ್ರಿ ಟೂ ಅಯೋಧ್ಯೆ ರೈಲು ಸಂಚಾರದ ಪ್ರಸ್ತಾವನೆ ಕೇಂದ್ರದ ಮುಂದಿದ್ದು, ಶೀಘ್ರವೇ ಸಂಚಾರಕ್ಕೆ ಚಾಲನೆ ದೊರೆಯಲಿದೆ. ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಸ್ವಾಮಿಗೆ ಎಎಂಆರ್ ಇಂಡಿಯಾ ಕಂಪನಿ 3 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಪ್ರಭಾವಳಿ, ಕಿರೀಟ, ಗಧೆ ನೀಡಲು ಒಪ್ಪಿಕೊಂಡಿದ್ದು, ಶೀಘ್ರವೇ ಸಮರ್ಪಣೆಯಾಗಲಿದೆ ಎಂದರು.
ಹೆಚ್ಚುವರಿ ಅನುದಾನ ಕೊಟ್ಟರಷ್ಟೇ ಉತ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆನೆಗೊಂದಿ ಉತ್ಸವಕ್ಕೆ 3 ಕೋಟಿ ರೂ. ಮಾತ್ರ ಮಂಜೂರಾಗಿದ್ದು, ಯಾವುದಕ್ಕೂ ಸಾಲುವುದಿಲ್ಲ. 6 ಕೋಟಿ ರೂ. ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಮೇ 23, 24ರಂದು ಉತ್ಸವ ಆಚರಿಸಲು ನಿರ್ಧರಿಸಿದ್ದು, ಹೆಚ್ಚುವರಿ ಅನುದಾನ ನೀಡಿದರೆ ಮಾತ್ರ ಉತ್ಸವ ಆಚರಿಸಲಾಗುವುದು. ಎರಡು ವರ್ಷಗಳ ಹಿಂದೆ ಆಚರಿಸಿದ ಉತ್ಸವದ ಬಾಕಿ ಹಣ ಬಂದಿದ್ದು, ಯಾವುದೇ ಬಾಕಿ ಉಳಿದಿಲ್ಲ. ಪ್ರವಾಸೋದ್ಯಮ ಸೇರಿ ವಿವಿಧ ಇಲಾಖೆಯಿಂದ ಅನುದಾನ ಕ್ರೋಡೀಕರಿಸಿ ಉತ್ಸವ ಆಚರಿಸಲಾಗುವುದು ಎಂದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಎಸ್.ಗಿರೇಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರು ಹೀರೂರು, ಗ್ರಾಮೀಣ ಘಟಕದ ಅಧ್ಯಕ್ಷ ಡಿ.ಕೆ.ಆಗೋಲಿ, ಪ್ರಮುಖರಾದ ಮನೋಹರಗೌಡ ಹೇರೂರು, ವೀರೇಶ ಬಲ್ಕುಂದಿ ಇತರರಿದ್ದರು.
ಅಭಿಮಾನೋತ್ಸವಕ್ಕೆ 10 ಸಾವಿರ ಜನ
ಚಿತ್ರದುರ್ಗದಲ್ಲಿ ಮೇ 9ರಂದು ಹಮ್ಮಿಕೊಂಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಕ್ಷೇತ್ರದಿಂದ 10 ಸಾವಿರ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಬಿಎಸ್‌ವೈ ಮತ್ತು ಅನಂತಕುಮಾರ ಶ್ರಮ ಸಾಕಷ್ಟಿದ್ದು, ಸೈಕಲ್‌ನಲ್ಲಿ ತಿರುಗಿ ಪಕ್ಷ ಸಂಘಟಿಸಿದ್ದಾರೆ. ಕಾರ್ಯಕರ್ತರನ್ನು ಒಪ್ಪಿಕೊಳ್ಳುತ್ತಿದ್ದ ಬಿಎಸ್‌ವೈಯಿಂದಲೇ ಹಲವರು ಪಕ್ಷದ ಪ್ರಮುಖ ಮುಖಂಡರಾಗಿ ಬೆಳೆದಿದ್ದಾರೆ. ಅಂತಹ ಮಹನೀಯರ ಅಭಿಮಾನೋತ್ಸವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಅಚರಿಸಲಾಗುವುದು ಎಂದರು. ಬಿಎಸ್‌ವೈಯೊಂದಿಗಿನ ಒಡನಾಟ ಮತ್ತು ಆಡಳಿತ ವೈಖರಿ ಕುರಿತು ಮಾಜಿ ಸಂಸದ ಎಸ್.ಶಿವರಾಮನಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಎಚ್.ಎಸ್. ಗಿರೇಗೌಡ ಮತ್ತು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಅಭಿಪ್ರಾಯ ಹಂಚಿಕೊಂಡರು.
"
ಬಿಎಸ್‌ವೈ ಒಂದು ಶಕ್ತಿಯಾಗಿದ್ದು, ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್‌ವೈ ಸಾರ್ಥಕ ಶ್ರಮ ಸಾಕಷ್ಟಿದೆ.
— ಗಾಲಿ ಜನಾರ್ದನರೆಡ್ಡಿ, ಶಾಸಕ