ತಾಲೂಕಿನ ಹಿರೇ ಸೂಳಿಕೇರಿ ತಾಂಡದ ಅಂಗನವಾಡಿ ಕೇಂದ್ರದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. 
ಕೊಪ್ಪಳ

ಶಾಲಾಪೂರ್ವ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಸಿದ್ದಪ್ಪ ಕುರಿ ಅಭಿಪ್ರಾಯ
ಕೊಪ್ಪಳ : ಶಾಲಾಪೂರ್ವ ಶಿಕ್ಷಣವು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಮುಖ ಹಂತವಾಗಿದೆ. ಚಟುವಟಿಕೆ ಆಧಾರಿತ ಕಲಿಕೆಯ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಕಲಿಕೆಯ ಆಸಕ್ತಿ ಹಾಗೂ ಸೃಜನಶೀಲತೆ ಬೆಳೆಯುತ್ತದೆ. ಅಂಗನವಾಡಿ ಕೇಂದ್ರಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಹೇಳಿದರು.
ತಾಲೂಕಿನ ಹಿರೇ ಸೂಳಿಕೇರಿ ತಾಂಡದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಷರಾಭ್ಯಾಸ ಹಾಗೂ ಒಂದನೇ ತರಗತಿಗೆ ಸೇರುವ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಶಾಲೆಯ ಮುಖ್ಯಗುರು ಹನುಮಂತಪ್ಪ ಮಾತನಾಡಿ, ಅಂಗನವಾಡಿಯಲ್ಲಿ ಕಲಿತ ಮಕ್ಕಳು ಮೊದಲನೇ ತರಗತಿಯಲ್ಲಿ ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಭಾಗವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ಆಕಾರಗಳು, ಬಣ್ಣಗಳು, ಅಂಕಿಗಳು, ಶಿಶುಗೀತೆಗಳು, ಅಂಗನವಾಡಿ ನಿಯಮಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಅಂಗನವಾಡಿಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಅತಿಥಿಗಳಿಂದ ಅಕ್ಷರಾಭ್ಯಾಸ ಮಾಡಿಸಲಾಯಿತು. ಮೂರು ವರ್ಷಗಳ ಶಾಲಾಪೂರ್ವ ಶಿಕ್ಷಣ ಪೂರ್ಣಗೊಳಿಸಿ ಒಂದನೇ ತರಗತಿಗೆ ತೆರಳಿದ 10 ಮಕ್ಕಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಎಸ್​ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ ಕುಂಬಾರ್​, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇತರರಿದ್ದರು.