ಯಲಬುರ್ಗಾ ತಾಲೂಕಿನ ಗುನ್ನಾಳ ಅಂಗನವಾಡಿ ಕೇಂದ್ರ. 
ಕೊಪ್ಪಳ

ಬಾಲವಾಡಿಲೇ ಪೂರ್ವ ಪ್ರಾಥಮಿಕ ಶಿಕ್ಷಣ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಮಕ್ಕಳಿಗಾಗಿ ಸರ್ಕಾರ ಕ್ರಮ
  • 20 ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಕ್ಕೆ ಸಿದ್ಧತೆ
ಯಲಬುರ್ಗಾ: ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ 20 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಖಾಸಗಿ ಶಾಲೆಗಳ ಮಾದರಿಯಲ್ಲೇ ಮಕ್ಕಳಿಗೆ ಆರಂಭಿಕ ಶಿಕ್ಷಣ ಕಲ್ಪಿಸುವ ಯೋಜನೆಯಡಿ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಆರಂಭವಾಗಲಿವೆ. ಬಡ ಹಾಗೂ ಮಧ್ಯಮ ವರ್ಗದ ಪಾಲಕರು ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕದ ಭಾರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲೇ ಮಕ್ಕಳಿಗೆ ಉಚಿತ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತಿರುವುದು ಪಾಲಕರಲ್ಲಿ ಸಂತಸ ಮೂಡಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಜತೆಗೆ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಆಯ್ಕೆಯಾದ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ, ಕೊಠಡಿ ಹಾಗೂ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.
ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗಿದ್ದು, ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪುಸ್ತಕಗಳನ್ನು ಇಲಾಖೆಯಿಂದ ಪೂರೈಸಲಾಗಿದೆ. ಮಕ್ಕಳಿಗೆ ಆಟದ ಮೂಲಕ ಕಲಿಕೆ, ಭಾಷಾ ಕೌಶಲ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲು ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ಪದವೀಧರ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುವ ಹಾಗೂ ಅಗತ್ಯ ಸೌಲಭ್ಯ ಹೊಂದಿರುವ ಅಂಗನವಾಡಿ ಕೇಂದ್ರಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.
ಆಯ್ಕೆಯಾದ ಕೇಂದ್ರಗಳು: ಕುಕನೂರು ತಾಲೂಕಿನ ಸಿದ್ನೆಕೊಪ್ಪ, ರ‌್ಯಾವಣಕಿ, ಹಿರೇಬೀಡಿನಾಳ, ಹೊನ್ನುಣಸಿ, ಕುದರಿಮೋತಿ (2 ಕೇಂದ್ರ), ಮಸಬಹಂಚಿನಾಳ, ವಟಪರವಿ, ತಳಕಲ್ಲ, ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮ್ಯಾದನೇರಿ, ಗುನ್ನಾಳ, ಕಡಬಲಕಟ್ಟಿ, ಬಳೂಟಗಿ, ಬಸಾಪೂರ, ಕಟಗಿಹಳ್ಳಿ, ಬುಕನಕಟ್ಟಿ, ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ ಹಾಗೂ ಯಲಬುರ್ಗಾ ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಚಾಲನೆ ನೀಡಲಾಗುತ್ತಿದೆ.