ವಡ್ಡರಹಟ್ಟಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ನಾಗರಿಕ ಸಮಿತಿ ಸದಸ್ಯರು ಗಂಗಾವತಿ ಜೆಸ್ಕಾಂ ಎಇಇ ಮಂಜುನಾಥ್‌ಗೆ ಗುರುವಾರ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಸಮಿತಿ ಪ್ರಮುಖರಾದ ವೀರೇಶಪ್ಪ ನಾಯಕ, ಚಿನ್ನಪ್ಪ ನಾಯಕ, ಡಾ.ಮಹೇಶ ಹೊಸ್ಮನಿ, ಯರಿಸ್ವಾಮಿಗೌಡ ತೋಟದ್ ಇತರರಿದ್ದರು.
- ಜೆಸ್ಕಾಂ ಎಇಇ ಮಂಜುನಾಥ್‌ಗೆ ವಡ್ಡರಹಟ್ಟಿ ನಿವಾಸಿಗಳ ಮನವಿ
- ಶಾಸಕರಿಗೂ ಕೋರಿಕೆ ಸಲ್ಲಿಕೆ
ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಭಾಗದ ವಿದ್ಯುತ್ ಸಮಸ್ಯೆ ನೀಗಿಸಲು ಪ್ರತ್ಯೇಕ ಫೀಡರ್ ಲೈನ್ ಅಳವಡಿಸುವಂತೆ ಒತ್ತಾಯಿಸಿ ನಾಗರಿಕ ಸಮಿತಿ ಸದಸ್ಯರು ಜೆಸ್ಕಾಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ವಡ್ಡರಹಟ್ಟಿ ಮತ್ತು ವಡ್ಡರಹಟ್ಟಿ ಕ್ಯಾಂಪ್ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ಬೇಡಿಕೆ ಮನವಿಯನ್ನು ಜೆಸ್ಕಾಂ ಎಇಇ ಮಂಜುನಾಥ್‌ಗೆ ಸಲ್ಲಿಸಿದರು. ನಂತರ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರತ್ಯೇಕ ಫೀಡರ್ 11 ಕೆ.ವಿ.ಲೈನ್ ಅಳವಡಿಸುವಂತೆ ಒತ್ತಾಯಿಸಿದರು.
ತಾಲೂಕಿನಲ್ಲಿ ವಡ್ಡರಹಟ್ಟಿ ಅತೀ ದೊಡ್ಡದಾಗಿದ್ದು, ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಶಾಲಾ-ಕಾಲೇಜು ಹಾಗೂ ವಾಣಿಜ್ಯ ಕಟ್ಟಡಗಳು, ಹೋಟೆಲ್, ರೆಸ್ಟೋರೆಂಟ್‌ಗಳಿವೆ. ಗ್ರಾಮಕ್ಕೆ ಸಮಪರ್ಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪದೆಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದು, ವೋಲ್ಟೇಜ್ ಕಡಿಮೆಯಾಗುವುದು, ಗಾಳಿ-ಮಳೆ ಬಂದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ನಿವಾಸಿಗಳಿಗೆ ತೊಂದರೆಯಾಗಿದ್ದು, ಉದ್ಯಮಿದಾರರು ಸಂಕಷ್ಟದಲ್ಲಿದ್ದಾರೆ. ವೆಂಕಟಗಿರಿ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿದೆ. ಬಳಕೆದಾರರ ಸಂಖ್ಯೆಗೆ ಅನುಗುಣ ವಿದ್ಯುತ್ ಪೂರೈಕೆ ಸಾಮರ್ಥ್ಯ ಹೆಚ್ಚಿಸಿಲ್ಲ. ಗಂಗಾವತಿ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಬೇಕು ಇಲ್ಲವೇ ಸದ್ಯ ಇರುವ ವೆಂಕಟಗಿರಿ ವಿದ್ಯುತ್ ಉಪಕೇಂದ್ರದಿಂದ ಪ್ರತ್ಯೇಕ ಫೀಡರ್ 11 ಕೆವಿ ಲೈನ್ (ಮಾರ್ಗ) ಅಳವಡಿಸಬೇಕು. ವಡ್ಡರಹಟ್ಟಿ ಗ್ರಾಮದಲ್ಲಿ ಹಳೇ ಕಂಬಗಳಿದ್ದು, ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ, ಎಇಇ ಮಂಜುನಾಥ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಸಮಿತಿ ಪ್ರಮುಖರಾದ ವೀರೇಶಪ್ಪ ನಾಯಕ, ಚಿನ್ನಪ್ಪ ನಾಯಕ, ಟಿ.ಮಲ್ಲೇಶಪ್ಪ ನಾಯಕ, ಬಸವರಾಜಪ್ಪ, ಡಾ.ಮಹೇಶ ಹೊಸ್ಮನಿ, ಯರಿಸ್ವಾಮಿಗೌಡ ತೋಟದ್, ಶಿವರಾಜ್, ಹರನಾಯಕ, ಹನುಮಂತ, ಸೋಮಯ್ಯಸ್ವಾಮಿ, ಬಸವರಾಜ ಸಂಗಟಿ, ಬಸವಂತ ಪಾಟೀಲ್, ಸಿದ್ದನಗೌಡ, ವಿಶ್ವನಾಥ ಗಡ್ಡಿ, ಮುದಿಯಪ್ಪ ಇತರರಿದ್ದರು.