ಬಾದಿಮನಾಳ ಕ್ರಾಸ್‌ನಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಾದಿಮನಾಳ ಕನಕ ಗುರು ಪೀಠದ ಪೀಠಾಧಿಪತಿ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಬಸವರಾಜ ಹಳ್ಳೂರ, ಈರಣ್ಣ ಗಜೇಂದ್ರಗಡ, ಮಹಾಂತೇಶ ಗಣವರಿ, ಕಲ್ಲಪ್ಪ ತಳವಾರ, ಚಂದಪ್ಪ ತಳವಾರ, ಅಶೋಕ ವಾಲಿಕಾರ ಇತರರಿದ್ದರು.
ಹನುಮನಾಳ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಸೋಮವಾರ ಬಾದಿಮನಾಳ ಕ್ರಾಸ್‌ನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಹೋಬಳಿ ವ್ಯಾಪ್ತಿಯ ಬಾದಿಮನಾಳ, ಜಹಗೀರಗುಡದೂರ, ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ಕೃಷ್ಣ ಜಲ ಭಾಗ್ಯ ನಿಗಮದಿಂದ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಶೇ.50 ನೀರು ತುಂಬಿಸಲು ಅನುಮತಿ ನೀಡಿ ಒಂದು ವರ್ಷವಾಗಿದೆ. ಆದರೆ, ಈವರೆಗೆ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಮಳೆ ಕೊರತೆಯಿಂದ ಕೆರೆಗಳು ಬತ್ತಿವೆ. ಇದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ನೀರು ಬಿಡಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಯ ಹನುಮಸಾಗರ ಪೈಪ್‌ಲೈನ್‌ನಿಂದ ಸಣ್ಣ ನೀರಾವರಿ ಇಲಾಖೆಯು ಅಳವಡಿಸಿರುವ ಪೈಪ್‌ಲೈನ್‌ಗೆ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಮೂರು ಕೆರೆಗಳ ತುಂಬಿಸುವ ಕುರಿತು ಪರಿಶೀಲಿಸಲಾಗಿತ್ತು. ಆದರೆ, ಯೋಜನೆ ನನೆಗುದಿಗೆ ಬಿದ್ದಿದ್ದು, ಅಗತ್ಯ ಸೌಲಭ್ಯ ಪಡೆಯಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಕೆರೆ ತುಂಬಿಸುವ ಯೋಜನೆಯಲ್ಲಿ ಹನುಮನಾಳ ಹೋಬಳಿಯನ್ನು ನಿರ್ಲಕ್ಷಿಸಲಾಗಿದೆ.. ಮಳೆ ಅಭಾವದಿಂದ ಅಂತರ್ಜಲ ಕುಸಿಯುತ್ತಿದೆ. ಸರ್ಕಾರ ರೈತರಿಗೆ ಅಗತ್ಯವಾಗಿ ಬೇಕಾದ ನೀರು, ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ನೀಡಲಿ.ಕೆರೆಗಳಿಗೆ ನೀರು ಬಿಡುವವರೆಗೆ ನಾವು ಪ್ರತಿಭಟನೆ ಕೈಬಿಡಲ್ಲ ಎಂದರು.
ಸ್ಥಳಕ್ಕೆ ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹಾಗೂ ಇಬ್ಬರು ಇಂಜಿನಿಯರ್‌ಗಳು ಬೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಸಣ್ಣ ನೀರಾವರಿ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ನೀರು ಬಿಡಲು ಕ್ರಮ ಕೈಗೊಳ್ಳುವವ ವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೋದರು.
ಬಾದಿಮನಾಳ ಕ್ರಾಸ್‌ನಲ್ಲಿ ಬೆಳಗ್ಗೆ ಕುಷ್ಟಗಿ-ಬಾದಾಮಿ, ಗುಡೂರ-ಗಜೇಂದ್ರಗಡ ಸಂಪರ್ಕಿಸುವ ರಸ್ತೆಗಳಿಗೆ ಬೃಹತ್ ಮರದ ತುಂಡುಗಳನ್ನು ಹಾಕಿ ರಸ್ತೆ ಸಂಚಾರ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.