ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಮುನಿರಾಬಾದ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹುಲಿಗಿ, ಶಿವಪುರ, ಅಗಳಕೇರಾ, ಹಿಟ್ನಾಳ, ಬಂಡಿಹರ್ಲಾಪುರ, ಆನೆಗೊಂದಿ ಹಾಗೂ ಸಂಗಾಪುರ ಗ್ರಾಮಗಳ ನೀರು ಬಳಕೆದಾರರ ಸಂಘ ಮುಖಂಡರು, ರೈತರು ಭಾಗವಹಿಸಿರುವುದು. 
ಕೊಪ್ಪಳ

ವಿಜಯನಗರ ಕಾಲುವೆಗಳಿಗೆ ನೀರು ಹರಿಸಿ

ಕುರುವತ್ತಿ ಶ್ರೀಕಾಂತಪ್ಪ
ಮುನಿರಾಬಾದ್: ತುಂಗಭದ್ರಾ ಜಲಾಶಯಕ್ಕೆ ಸದ್ಯ 18 ಸಾವಿರ ಕ್ಯೂಸೆಕ್ ಒಳಹರಿವಿದ್ದು, ಸಂಗ್ರಹಣೆಯು 25 ಟಿಎಂಸಿ ಅಡಿ ತಲುಪಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಕಾಲುವೆಗಳಿಗೆ ತಕ್ಷಣವೇ ನೀರು ಹರಿಸಬೇಕೆಂದು ಆಗ್ರಹಿಸಿ ಹುಲಿಗಿ, ಶಿವಪುರ, ಅಗಳಕೇರಾ, ಹಿಟ್ನಾಳ, ಬಂಡಿಹರ್ಲಾಪುರ, ಆನೆಗುಂದಿ ಹಾಗೂ ಸಂಗಾಪುರ ಗ್ರಾಮಗಳ ನೀರು ಬಳಕೆದಾರರ ಸಂಘದ ಮುಖಂಡರು ಮತ್ತು ರೈತರು ಒತ್ತಾಯಿಸಿದರು.
ಶಿವಪುರದ ರಾಮಮಂದಿರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ 15 ಹಳ್ಳಿಗಳ 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. 600 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಿಜಯನಗರ ಕಾಲುವೆಯನ್ನೇ ನಂಬಿ ಬದುಕುತ್ತಿರುವ 11-ಎ’ ವಿತರಣೆ ವ್ಯಾಪ್ತಿಯ ರೈತರಿಗೆ ಪ್ರತಿವಷರ್ದ ಕೋಟಾದಂತೆ ಸಮರ್ಪಕವಾಗಿ ನೀರು ಬಿಡಬೇಕು ಎಂದು ಸಭೆಯಲ್ಲಿ ಒಮ್ಮತದಿಂದ ಒತ್ತಾಯಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರಣದಿಂದ ರೈತರಿಗೆ ಸರಿಯಾಗಿ ನೀರು ಲಭ್ಯವಾಗಿರಲಿಲ್ಲ. ಇದರಿಂದ ಈ ಭಾಗದ ಜನ ಹಾಗೂ ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರು ವೇಗವಾಗಿ ಹರಿದು ಬರುತ್ತಿದೆ. ಸದ್ಯ 25 ಟಿಎಂಸಿ ಅಡಿ ಸಂಗ್ರಹವಿರುವುದರಿಂದ ಕಾಲುವೆಗಳಿಗೆ ನೀರು ಬಿಡಲು ಯಾವುದೇ ತಾಂತ್ರಿಕ ತೊಂದರೆಯಿಲ್ಲ ಎಂದು ರೈತರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ನೀರು ಬಳಕೆದಾರರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವೆಂಕಟೇಶ ಕಂಪಸಾಗರ, ಪಾಲಕ್ಷಪ್ಪ ಗುಂಗಾಡಿ, ಯಂಕಪ್ಪ ಹೊಸಳ್ಳಿ, ಧರ್ಮರಾವ್ ರಾಜ್, ಶಿವಣ್ಣ ಚಲಸಾನಿ, ಹುಲಗಪ್ಪ ಗಡಾದ, ಪ್ರಭುರಾಜ್ ಪಾಟೀಲ್, ವೆಂಕಟಯ್ಯ, ಸತ್ಯನಾರಾಯಣ ರೆಡ್ಡಿ, ಆನಂದ ಕೊಡಗಾನೂರ ಸೇರಿದಂತೆ ಐದು ನೀರಾವರಿ ಸಂಘಗಳ ಪ್ರಮುಖರು ಹಾಗೂ ನೂರಾರು ಪ್ರಗತಿಪರ ರೈತರು ಇದ್ದರು.