ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮಕ್ಕೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ ಭೇಟಿ ನೀಡಿ ಮುಚ್ಚಿಹೋದ ಚರಂಡಿಗಳನ್ನು ಪರಿಶೀಲಸಿದರು. 
ಕೊಪ್ಪಳ

ಕಲುಷಿತ ನೀರು ಸರಬರಾಜಾಗದಂತೆ ಕ್ರಮ ವಹಿಸಿ

ಕುರುವತ್ತಿ ಶ್ರೀಕಾಂತಪ್ಪ
ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದ 2ನೇ ವಾರ್ಡ್‌ನ ದಲಿತರ ಕಾಲನಿಗೆ ಹುಳು ಮಿಶ್ರಿತ ಕಲುಷಿತ ನೀರು ಸರಬರಾಜು ಪ್ರಕರಣ ವಿಧಾನ ಪರಿಷತ್‌ನಲ್ಲಿ ಚರ್ಚೆಯಾದ ಬಳಿಕ ಗಂಭೀರತೆ ಪಡೆದುಕೊಂಡಿದ್ದು, ಗುರುವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು..
ಜ.27ರಂದು ವಿಜಯವಾಣಿ ಪತ್ರಿಕೆಯಲ್ಲಿ ಕಲಕೇರಿಗೆ ಕಲುಷಿತ ನೀರು ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವಿಧಾನ ಪರಿಷತ್ತ್ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅನುಮತಿ ಪಡೆದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇಟ್ಟುಕೊಂಡು ಸಮಸ್ಯೆಯ ಬಗ್ಗೆ ವಿಪ ಸದಸ್ಯೆ ಹೇಮಲತಾ ನಾಯಕ ಧ್ವನಿ ಎತ್ತಿದ್ದರು.
ಇದರ ಬೆನ್ನಲ್ಲೇ ತಹಸೀಲ್ದಾರ್, ಇಒ, ಪಿಡಿಒ ಭೇಟಿ ನೀಡಿ ನಿವಾಸಿಗಳೊಂದಿಗೆ ಚರ್ಚಿಸಿದ್ದಾರೆ. ಕಾಲನಿಯಲ್ಲಿನ ಕೊಳಚೆ ನೀರು ಹರಿಯದ ಚರಂಡಿಗಳು, ಚರಂಡಿಯಲ್ಲಿನ ನೀರು ಸರಬರಾಜಿನ ಪೈಪ್, ಶುದ್ಧ ಕುಡಿವ ನೀರಿನ ಘಟಕ ಪರಿಶೀಲನೆ ನಡೆಸಿದರು. ಅಲ್ಲದೇ, ಕಲುಷಿತ ನೀರು ಸರಬರಾಜಾಗದಂತೆ ಕ್ರಮ ವಹಿಸಬೇಕಿದ್ದ ನೀರಗಂಟಿ ಮಹ್ಮದ್‌ಗೆ ತರಾಟೆಗೆ ತೆಗೆದುಕೊಂಡರು. ದುರಸ್ಥಿಯಲ್ಲಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಗ್ರಾಕುನೀ ಇಲಾಖೆ ಇಲ್ಲವೇ ಸೋಲಾರ್ ಕಂಪನಿಯ ಸಹಕಾರದಿಂದ ಸರಿಪಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಚರಂಡಿ ಒಣಗಿದ ಬಳಿಕ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ತೀರ್ಮಾನಿಸಲಾಯಿತು.