ಗಂಗಾವತಿ ಠಾಣೆ ವ್ಯಾಪ್ತಿಯಲ್ಲಿ ಹಾಕಿದ್ದ ದಂಡ ರಸೀದಿಯಲ್ಲಿ ಬೇವೂರ ಠಾಣೆ ಮುದ್ರಿತವಾಗಿರುವುದು.
ಗಂಗಾವತಿ: ಮೋಟಾರ್ ವಾಹನ ಕಾಯ್ದೆಯಡಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ ವಿಧಿಸುತ್ತಿರುವ ದಂಡ ಮತ್ತು ಪ್ರಕರಣ ದಾಖಲು ವಿಚಾರದಲ್ಲಿ ನಿತ್ಯ ಗದ್ದಲ ನಡೆಯುತ್ತಿದ್ದು, ಪೊಲೀಸ್ ಸಿಬ್ಬಂದಿಗೆ ನೀಡಿರುವ ದಂಡ ವಸೂಲಿ ಮಶೀನ್ ಬಗ್ಗೆ ಅನುಮಾನ ಹೆಚ್ಚುತ್ತಿದೆ.
ನಗರದ ಸಿಬಿಎಸ್ ವೃತ್ತದಲ್ಲಿ ಕಾಯ್ದೆಯನ್ನು ಉಲ್ಲಂಸುತ್ತಿರುವ ಸವಾರರ ಮೇಲೆ ನಿಗಾವಹಿಸಲು ಮತ್ತು ಆದಾಯ ಹೆಚ್ಚಿಸುವುದಕ್ಕಾಗಿ ಎಎಸೈ, ಎಚ್‌ಸಿ, ಪಿಸಿ ಮತ್ತು ಹೋಂಗಾರ್ಡ್ ನಿಯೋಜಿಸಲಾಗಿದೆ. ವೃತ್ತದ ವ್ಯಾಪ್ತಿ ಚಿಕ್ಕದಾಗಿದ್ದು, ವಾಹನಗಳ ಸಂಖ್ಯೆ ಮಿತಿ ಮೀರಿದೆ. ಆದ್ದರಿಂದ ಕಾಯ್ದೆ ಉಲ್ಲಂಘನೆ ಸಾಮಾನ್ಯ ವಾಗುತ್ತಿದೆ.
ಮುದಗಲ್ ಮೂಲದ ಶ್ಯಾಮೀದ್ ಎಂಬಾತ ಬೈಕ್‌ನಲ್ಲಿ ಮೂವರನ್ನು ಕುರಿಸಿಕೊಂಡು ವಾಹನ ಚಲಾಯಿಸುತ್ತಿದ್ದಾಗ ನಿಯೋಜಿತ ಎಎಸೈ ಷರ್ೀ ಅವರು ತಡೆದಿದ್ದಾರೆ. ನಿಲ್ಲಿಸುವ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಗಿದ್ದು, ಮೂವರು ಇದ್ದ ಕಾರಣಕ್ಕೆ 500ರೂ. ದಂಡ ವಿಧಿಸಲಾಗಿದೆ. ಆನ್‌ಲೈನ್ ಮೂಲಕ ರಸೀದಿ ಹಾಕಲಾಗಿದೆ. ಹಣ ನೀಡಲು ನಿರಾಕರಿಸಿದ್ದರಿಂದ ಎಎಸೈ ಮತ್ತು ವಾಹನ ಸವಾರ ಮಧ್ಯೆ ವಾಗ್ವಾದವಾಗಿದೆ. ಎಎಸೈ ಷರ್ೀ ಅವರು ಸವಾರನನ್ನು ತಳ್ಳಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸವಾರನಿಗೆ ನೀಡಿರುವ ರಸೀದಿಯು ಬೇವೂರ ಪೊಲೀಸ್ ಠಾಣೆ ಹೆಸರಿನಲ್ಲಿ ಇರುವುದು ಪೊಲೀಸರ ದಂಡ ವಸೂಲಿ ನಡೆ ಬಗ್ಗೆ ಅನುಮಾನ ಮೂಡಿಸಿದೆ. ವಸೂಲಿ ಗಂಗಾವತಿ ಠಾಣೆ ವ್ಯಾಪ್ತಿಯಲ್ಲಿ ಆದರೆ ಕ್ರೆಡಿಟ್ ಮಾತ್ರ ಬೇವೂರ ಠಾಣೆಗೆ ಹೋಗುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಂಚಾರಿ ಪಿಎಸೈ ಶಾರದಮ್ಮ ಪ್ರತಿಕ್ರಿಯಿಸಿ, ರಾಜ್ಯ ಹೆದ್ದಾರಿಯಲ್ಲಿ ಕಾಯ್ದೆ ಉಲ್ಲಂಸಿದವರಿಗೆ ದಂಡ ಹಾಕಲು ನೀಡಿದ್ದ ಯಂತ್ರಗಳನ್ನು (ಆನ್‌ಲೈನ್ ಮಷೀನ್) ಗಂಗಾವತಿ ಠಾಣೆ ವ್ಯಾಪ್ತಿಯಲ್ಲಿ ಬಳಸಿಕೊಳ್ಳಲು ಇಲಾಖೆ ನೀಡಿದೆ. ರಾಜ್ಯ ಹೆದ್ದಾರಿಯಲ್ಲಿ ದಂಡ ವಸೂಲಿಗೆ ಬ್ರೇಕ್ ಹಾಕಿದ್ದರಿಂದ ಅನಿವಾರ್ಯವಾಗಿ ಹೆದ್ದಾರಿ ವ್ಯಾಪ್ತಿಗೆ ಮೀಸಲಿದ್ದ ಮಷೀನ್‌ಗಳನ್ನು ಕೆಲ ಠಾಣೆಗೆ ನೀಡಿದ್ದು, ಅದರಂತೆ ಗಂಗಾವತಿ ಸಂಚಾರಿ ಠಾಣೆಗೂ ಬಂದಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ಆನ್‌ಲೈನ್‌ನಲ್ಲಿ ಹಾಕಿರುವ ದಂಡದ ಹಣ ರಾಜ್ಯ ಪೊಲೀಸ್ ಇಲಾಖೆ ಖಾತೆಗೆ ಸೇರಲಿದೆ. ವಾಹನ ಸವಾರ ಶಾಮೀದ್ ಕಾಯ್ದೆ ಉಲ್ಲಂಸಿದ್ದಲ್ಲದೇ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಘಟನೆ ನಡೆದ ನಾಲ್ಕು ದಿಕ್ಕಿನಲ್ಲೂ ಸಿಸಿ ಕ್ಯಾಮರಾಗಳಿದ್ದು, ಪರಿಶೀಲಿಸಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ, ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.