ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಶೇಂಗಾ ಹೊಲಕ್ಕೆ ಕೆವಿಕೆ ತಜ್ಞೆ ರೇವತಿ, ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ ಸೋಮವಾರ ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ಕೃಷಿ ಅಧಿಕಾರಿ ಎಸ್.ಜಿ.ಹರೀಶ ಇತರರಿದ್ದರು. 
ಕೊಪ್ಪಳ

ಎಣ್ಣೆಕಾಳು ಕ್ಷೇತ್ರ ವಿಸ್ತರಣೆಗೆ ಯೋಜನೆ

ಶಾಮಸುಂದರ್ ಕೊಪ್ಪಳಕರ್
ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಹೊಲಗಳಲ್ಲಿ ಶೇಂಗಾ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗ ಮತ್ತು ಕೀಟ ಬಾಧೆ ನಿಯಂತ್ರಣ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಶೇಂಗಾ ಬೆಳೆಯ ಪ್ರಾಮುಖ್ಯತೆ ಮತ್ತು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ ಮಾತನಾಡಿ, ವಾತಾವರಣದಲ್ಲಿ ಕಡಿಮೆ ಉಷ್ಣಾಂಶದಿಂದ ಶೇಂಗಾ ಬೆಳೆಯಲ್ಲಿ ಮೊಗ್ಗು ಉದುರುತ್ತಿದ್ದು, ಕ್ರಿಮಿನಾಶಕ ಸಿಂಪಡಿಸುವುದರ ಜತೆಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಖಾದ್ಯ ತೈಲ ಶೇ.70 ಆಮದಾಗುತ್ತಿದ್ದು, ಸ್ವಾವಲಂಬನೆಗಾಗಿ ಮತ್ತು ಎಣ್ಣೆಕಾಳು ಬೆಳೆಯುವ ಕ್ಷೇತ್ರ ವಿಸ್ತರಣೆಗಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆ ಜಾರಿಗೊಳಿಸಿದೆ ಎಂದರು.
ರೋಗ ನಿಯಂತ್ರಣ, ಕ್ರಿಮಿನಾಶಕ ಸಿಂಪಡಣೆ ಮತ್ತು ಆಧುನಿಕ ತಂತ್ರಜ್ಞಾನ ಕುರಿತು ಕೆವಿಕೆ ಸಸ್ಯರೋಗ ಶಾಸತಜ್ಞೆ ರೇವತಿ ಮಾಹಿತಿ ನೀಡಿದರು. ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಆಗೋಲಿ, ವಿಠಲಾಪುರ ಮತ್ತು ಹಂಪಸದುರ್ಗಾದಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಬೇಸಾಯ ಶಾಸತಜ್ಞ ಡಾ.ಮಲ್ಲೇಶ, ಕೃಷಿ ಅಧಿಕಾರಿಗಳಾದ ಎಸ್.ಜಿ. ಹರೀಶ, ರೈತರಾದ ಮಂಜು, ಪಂಪಾಪತಿ, ಶಶಿಭೂಷಣ ಇತರರಿದ್ದರು.