ವಿ.ನಾರಾಯಣ ಲಕ್ಷ್ಮಣ 
ಕೊಪ್ಪಳ

ಆತ್ಮಹತ್ಯೆ ಕೇಸ್, ಪಿಐ-ಮುಖ್ಯಪೇದೆ ಅಮಾನತು

ಕನಕಗಿರಿ: ಬಸವರಾಜರೆಡ್ಡಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಟ್ಟಣ ಠಾಣೆಯ ಪಿಐ ವಿ.ನಾರಾಯಣ ಹಾಗೂ ಮುಖ್ಯಪೇದೆ ಲಕ್ಷ್ಮಣ ಅಮಾನತುಗೊಳಿಸಿ ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಆದೇಶ ಹೊರಡಿಸಿದ್ದಾರೆ.

ಪಕ್ಕದ ಜಮೀನಿನ ನಿವೇಶನದ ಮಾಲೀಕ ಮಹಾವಲಿಸಾಬ್ ಹಾಗೂ ಮಕ್ಕಳು ನನ್ನ ಜಾಗ ಒತ್ತುವರಿ ಮಾಡುತ್ತಿದ್ದಾರೆಂದು ಬಸವರಾಜ ರೆಡ್ಡಿ ಆ.12ರಂದು ಪಪಂಗೆ ತಕರಾರು ಸಲ್ಲಿಸಿದ್ದರು. ಒತ್ತುವರಿದಾರರಿಂದ ದೌರ್ಜನ್ಯಕ್ಕೊಳಗಾಗಿ ಆ.13ರಂದು ಠಾಣೆ ಮೆಟ್ಟಿಲೇರಿದ್ದರು. ಆದರೆ, ಕರ್ತವ್ಯದಲ್ಲಿದ್ದ ಎಸ್‌ಎಚ್‌ಒ ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ. 
ಇದರಿಂದ ಬಸವರಾಜರೆಡ್ಡಿ ಅ. 15 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ.16ರಂದು ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪೊಲೀಸರು ಹಾಗೂ ಪಪಂ ಅಧಿಕಾರಿಗಳ ನಿರ್ಲಕ್ಷ್ಯವೇ ಬಸವರಾಜರೆಡ್ಡಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಸ್ಥಳೀಯ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳ್ಳಾರಿ ವಲಯದ ಐಜಿ ಪಿ.ಎಸ್. ಹರ್ಷ, ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ವಿಜಯನಗರ ಎಸ್ಪಿ ಜಾಹ್ನವಿ ಸ್ಥಳಕ್ಕೆ ಆಗಮಿಸಿದ್ದರು.
1300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಬಂಧನವಾಗಿದೆ. ಇದೀಗ ಕರ್ತವ್ಯ ನಿರ್ಲಕ್ಷ್ಯದಡಿ ಪಿಐ, ಮುಖ್ಯ ಪೇದೆಯನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ.