ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮಕ್ಕೆ ಕೊಪ್ಪಳದ ಹಿರಿಯ ಶ್ರೇಣಿ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಭೇಟಿ ನೀಡಿ, ಗ್ರಾಮಸ್ಥರಿಗೆ ವೈಯಕ್ತಿಕ ಶೌಚಗೃಹ ನಿರ್ಮಾಣದ ಅನುಮತಿ ಪತ್ರವನ್ನು ಸೋಮವಾರ ವಿತರಿಸಿದರು. ತಾಪಂ ಇಒ ರಾಮರೆಡ್ಡಿ ಪಾಟೀಲ್, ಪಿಡಿಒ ರವೀಂದ್ರ ಇತರರಿದ್ದರು.
- ಬಯಲು ಬಹಿರ್ದೆಸೆ ಕುರಿತು ಮಾಹಿತಿ ಸಂಗ್ರಹ
- ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಜಾಗೃತಿ
ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಗ್ರಾಮಕ್ಕೆ ಕೊಪ್ಪಳದ ಹಿರಿಯ ಶ್ರೇಣಿ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಸೋಮವಾರ ಭೇಟಿ ಮಾಹಿತಿ ಬಯಲು ಶೌಚ ಕುರಿತು ಪಡೆದುಕೊಂಡರು.
ವಿಜಯವಾಣಿ ಪತ್ರಿಕೆಯಲ್ಲಿ ಜ.18ರಂದು ರಸ್ತೆಯೇ ಶೌಚಗೃಹ, ಸೀರೆಯೇ ಬಾಗಿಲು ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿ ಮಾಹಿತಿ ಪಡೆದು ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಮಹಿಳಾ ಸಾರ್ವಜನಿಕ ಶೌಚಗೃಹ ಕಾಮಗಾರಿ ಪರಿಶೀಲಿಸಿದರಲ್ಲದೇ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಕಾಲನಿಗಳಲ್ಲಾಗಬೇಕಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.
ನಗರದ ದ್ಯಾಮವ್ವ ದೇವಾಲಯ ಬಳಿ ಸ್ಥಳೀಯರೊಂದಿಗೆ ಸಭೆ ನಡೆಸಿ, ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಸಹಕರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಕೆಲವರಿಗೆ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಅನುಮತಿ ಪತ್ರ ವಿತರಿಸಿದರು. ಗ್ರಾಮದಲ್ಲಿನ ಕುಂದು ಕೊರತೆಗಳನ್ನು ಜನರಿಂದ ಆಲಿಸಿದರಲ್ಲದೇ, ಕ್ರಮ ಕೈಗೊಂಡಿರುವ ಬಗ್ಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.
ತಾಪಂ ಇಒ ರಾಮರೆಡ್ಡಿ ಪಾಟೀಲ್, ಪಿಡಿಒ ರವೀಂದ್ರ, ಗ್ರಾಮೀಣ ಪಿಎಸೈ ವೆಂಕಟೇಶ ಚವ್ಹಾಣ, ಗ್ರಾಮದ ಪ್ರಮುಖರಾದ ಹುಲುಗಪ್ಪ, ಚನ್ನಮಲ್ಲಮ್ಮ ಸೇರಿ ವಿವಿಧ ಸಂಘಟನೆ ಪ್ರಮುಖರಿದ್ದರು.
ಕಾಮಗಾರಿ ಪ್ರಗತಿ
ಮಹಿಳಾ ವೈಯಕ್ತಿಕ ಶೌಚಗೃಹ ಕಾಮಗಾರಿ ಪ್ರಗತಿಯಲ್ಲಿದ್ದು, ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹೈಟೆಕ್ ಶೌಚಗೃಹ ನಿರ್ಮಾಣಕ್ಕೂ ಗಮನಹರಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದು, ಶೀಘ್ರವೇ ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.