ಹನುಮಸಾಗರದ ನೂತನ ಪಪಂಗೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರೆಡ್ಡಿ ರಾಯನಗೌಡ್ರು ಅವರನ್ನು ಸನ್ಮಾನಿಸಲಾಯಿತು. ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸದಸ್ಯರಾದ ಶಿವಪ್ಪ ಕಂಪ್ಲಿ, ಡಾ.ಬಸವರಾಜ ಅಕ್ಕಿ, ಮಂಜುನಾಥ ಹುಲ್ಲೂರ, ಮರೆಗೌಡ ಬೊದೂರ, ಬಸವರಾಜ ಬಿಲ್ಕಾರ, ರಿಯಾಜ್‌ಖಾಜಿ ಇತರರಿದ್ದರು.
- ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ್ರು ಹೇಳಿಕೆ
- ಹನುಮಸಾಗರ ಪಪಂಗೆ ಅಧಿಕಾರ ಸ್ವೀಕಾರ
ಹನುಮಸಾಗರ: ಪಪಂನ ಎಲ್ಲ ವಿಭಾಗಗಳ ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸಿ, ಜನಸ್ನೇಹಿ ಆಡಳಿತ ಒದಗಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ್ರು ಹೇಳಿದರು.
ಇಲ್ಲಿನ ನೂತನ ಪಪಂಗೆ ಮೊದಲ ಮುಖ್ಯಾಧಿಕಾರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪಟ್ಟಣದ ಸ್ವಚ್ಛತೆ, ಬೀದಿದೀಪ, ಶುದ್ಧ ಕುಡಿವ ನೀರಿನ ಪೂರೈಕೆ ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಂದಿನ ಹತ್ತು ದಿನಗಳ ಕಾಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಅವರು ಕಾರ್ಯನಿರ್ವಹಿಸಲಿದ್ದು, ಫೆ.1ರಿಂದ ಸಂಪೂರ್ಣವಾಗಿ ಪಪಂ ಆಡಳಿತ ಅನುಷ್ಠಾನಕ್ಕೆ ಬರಲಿದೆ. ಪಟ್ಟಣದ ನಿವೇಶನಗಳ ಸ್ಥಿತಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತ ಸಂಬಂಧಿತ ಎಲ್ಲ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರೀಯಾಯೋಜನೆ ರೂಪಿಸಲಾಗುವುದು ಎಂದರು.
ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಇಲ್ಲಿವರೆಗೆ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಈಗಾಗಲೇ ಕೆಲವು ಕಾಮಗಾರಿಗಳ ಬಿಲ್‌ಗಳನ್ನು ಸಲ್ಲಿಸಲಾಗಿದ್ದು, ಬಾಕಿ ಬಿಲ್‌ಗಳನ್ನು ಪಟ್ಟಣ ಪಂಚಾಯತಿಯವರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸದಸ್ಯರಾದ ಶಿವಪ್ಪ ಕಂಪ್ಲಿ, ಡಾ.ಬಸವರಾಜ ಅಕ್ಕಿ, ಮಂಜುನಾಥ ಹುಲ್ಲೂರ, ಮರೇಗೌಡ ಬೋದೂರ, ಬಸವರಾಜ ಬಿಲ್ಕಾರ, ರಿಯಾಜ್‌ಖಾಜಿ, ಪ್ರಮುಖರಾದ ಹನುಮಂತ ಹಕ್ಕಿ, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್‌ಪಾಟೀಲ್, ಮೌಲಾಲಿ ಮೊಟಗಿ, ಸಿಬ್ಬಂದಿ ಇದ್ದರು.