- ಜಿಪಂ ಸಿಇಒ ವರ್ಣಿತ್ ನೇಗಿ ಆದೇಶ
ಗಂಗಾವತಿ: ಗ್ರಾಪಂ ಅನುದಾನಕ್ಕೆ ಸಂಬಂಧಿಸಿದಂತೆ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಟಗಿ ತಾಲೂಕಿನ ಯರಡೋಣಾ ಪಿಡಿಒ ಎನ್.ಶಿವರಾಜ ಅವರನ್ನು ಅಮಾನತು ಮಾಡಿ ಜಿಪಂ ಸಿಇಒ ವರ್ಣಿತ್ ನೇಗಿ ಆದೇಶ ಹೊರಡಿಸಿದ್ದಾರೆ.
ಯುವ ವಕೀಲರಿಗೆ ಪುಸ್ತಕ ಖರೀದಿಸಲು ಗ್ರಾಪಂನಲ್ಲಿ ಯೋಜನೆಯಿದ್ದು, ಈ ಬಗ್ಗೆ ಗಂಗಾವತಿ ವಕೀಲ ಮಲ್ಲೇಶಪ್ಪ ಎನ್ನುವವರು ದೂರವಾಣಿ ಮೂಲಕ ವಿಚಾಸಿದಾಗ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಬ್ಬರ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಕೀಲರನ್ನು ನಿಂದಿಸಿದ ಪ್ರಕರಣಕ್ಕೆ ತಾಲೂಕು ವಕೀಲರ ಸಂಘದ ಸದಸ್ಯರು ಪಿಡಿಒ ವಿರುದ್ಧ ಕ್ರಮಕ್ಕಾಗಿ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ನಗರ ಠಾಣೆಯಲ್ಲಿ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿತ್ತು.
ಘಟನೆ ವಿಚಾರಣೆಗೆ ಕಾರಟಗಿ ತಾಪಂ ಯೋಜನಾಧಿಕಾರಿ ರಾಘವೇಂದ್ರ ಅವರನ್ನು ಗ್ರಾಪಂಗೆ ನಿಯೋಜಿಸಿದ್ದು, ಅಂದು ಪಿಡಿಒ ಎನ್.ಶಿವರಾಜ ಗೈರಾಗಿದ್ದರು. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ಅನ್ವಯ ಅಮಾನತ್ತು ಮಾಡಿ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.