- ಡಾ. ಬಸವರಾಜ ಕ್ಯಾವಟರ್ ಸಂತಸ
ಕೊಪ್ಪಳ : ಪಂಚರಾಜ್ಯ ಚುನಾವಣಾ ಫಲಿತಾಂಶಗಳು ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸುವಂತಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತದಾರರು ಎನ್ಡಿಎ ಬೆಂಬಲಿಸುವ ಮೂಲಕ ನವ ಭಾರತಕ್ಕೆ ದಿಕ್ಸೂಚಿ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಫಲಿತಾಂಶಗಳು ಅಭಿವೃದ್ಧಿ, ಸ್ಥಿರತೆ ಮತ್ತು ಭದ್ರತೆಯ ಪರ ಜನರ ಸ್ಪಷ್ಟ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ಜನರ ವಿಶ್ವಾಸ ಮತ್ತೊಮ್ಮೆ ವ್ಯಕ್ತವಾಗಿದ್ದು, ದೇಶಾದ್ಯಂತ ಮೋದಿ ಹವಾ ಮುಂದುವರಿದಿದೆ ಎಂಬುದು ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದ ಫಲಿತಾಂಶವು ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆಗೆ ಬಲ ತುಂಬಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಎದುರಾದ ಸವಾಲುಗಳಿಗೆ ಇದು ಉತ್ತರವಾಗಿದ್ದು, ರಾಜ್ಯದಲ್ಲಿ ಬದಲಾವಣೆಯ ನಿರೀಕ್ಷೆ ಮೂಡಿಸಿದೆ ಎಂದರು.
ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸದಿರುವುದು ನಿರಾಶೆ ತಂದಿದೆ. ಆದರೆ, ಇದನ್ನು ಪಾಠವಾಗಿ ತೆಗೆದುಕೊಂಡು ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದು ಹೇಳಿದರು.
ಅಸ್ಸಾಂನಲ್ಲಿ ಬಿಜೆಪಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಏರಿ ಹ್ಯಾಟ್ರಿಕ್ ಸಾಧಿಸಿದ್ದು, ಪುದುಚೇರಿಯಲ್ಲೂ ಜನರ ವಿಶ್ವಾಸ ಉಳಿಸಿಕೊಂಡಿದೆ. ತಮಿಳುನಾಡು ಹಾಗೂ ಕೇರಳದಲ್ಲಿಯೂ ಎನ್ಡಿಎ ಸ್ಪರ್ಧಾತ್ಮಕವಾಗಿ ಹೋರಾಟ ನಡೆಸಿದ್ದು, ಮುಂದಿನ ದಿನಗಳಲ್ಲಿ ಆ ರಾಜ್ಯಗಳಲ್ಲಿಯೂ ಜನ ಬೆಂಬಲ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.