ಗಂಗಾವತಿ ಬಸವೇಶ್ವರ ಪ್ರತಿಮೆ ಬಳಿ ಆಯೋಜಿಸಿದ್ದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಪ್ರೊ. ರೂಪೇಶ ಪುತ್ತೂರು ಮಾತನಾಡಿದರು. ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಎಂ.ಆರ‌್ಹಾಳ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಇತರರಿದ್ದರು.
- ಸಂಪನ್ಮೂಲ ವ್ಯಕ್ತಿ ಪ್ರೊ. ರೂಪೇಶ ಪುತ್ತೂರು ಆಶಯ
ಗಂಗಾವತಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ಎಲ್ಲ ಕ್ಷೇತ್ರದಲ್ಲೂ ಸೂಕ್ತ ಸ್ಥಾನಮಾನ ದೊರೆಯಬೇಕಿದ್ದು, ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಶೇ.80 ಮೀಸಲು ದೊರೆಯಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೊ. ರೂಪೇಶ ಪುತ್ತೂರು ಹೇಳಿದರು.
ಕನ್ನಡ ಮತ್ತು ಕನ್ನಡಿಗರಿಗೆ ಪ್ರಾತಿನಿಧ್ಯಕ್ಕಾಗಿ ಬೀದರ್‌ನಿಂದ ಬೆಂಗಳೂರಿನವರೆಗೆ ಆರಂಭಿಸಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ಪ್ರತಿಮೆ ಬಳಿ ಮಂಗಳವಾರ ಮಾತನಾಡಿದರು. ಮಕ್ಕಳ ಸಂಖ್ಯೆ ಕಡಿಮೆ ಹಿನ್ನೆಲೆಯಲ್ಲಿ ಕನ್ನಡ ಶಾಲೆ ಮುಚ್ಚುವುದರ ಬದಲು ಕನ್ನಡ ಭಾಷೆ ಆಯ್ಕೆ ಪ್ರೇರೇಪಣೆಯ ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ಕನ್ನಡ ಶಾಲೆ ಉಳಿಸಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ. ರಾಜ್ಯದಲ್ಲಿ ಆರಂಭಿಸುವ ಖಾಸಗಿ ಕ್ಷೇತ್ರದ ಉದ್ಯಮದಲ್ಲಿ ಶೇ.80 ಉದ್ಯೋಗ ಕನ್ನಡಿಗರಿಗೆ ಮೀಸಲಿಡಬೇಕು. ಪಾದಯಾತ್ರೆ ಸಂದರ್ಭದಲ್ಲಿ ಸಂಗ್ರಹಿಸಿದ ಅನುಭವಗಳನ್ನು ಪ್ರಬಂಧದ ಮೂಲಕ ದಾಖಲೀಕರಿಸಲಾಗುತ್ತಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಅಶೋಕ್‌ಗೆ ಸಲ್ಲಿಸಲಾಗುವುದು. ಸೌಹಾರ್ದ, ಬಾಂಧವ್ಯ ಪಾದಯಾತ್ರೆ ಮೂಲಕ ಗಮನಸೆಳೆಯಲಾಗುವುದು ಎಂದರು.
ಪ್ರೊ.ರೂಪೇಶ ಪುತ್ತೂರುರನ್ನು ಸ್ವಾಗತಿಸಿ ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿ, 750ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿರುವುದು ಪ್ರಶಂಸನೀಯ. ಕನ್ನಡಿಗರು ಮತ್ತು ಭಾಷಾ ಪ್ರೇಮಿಗಳು ಬೆಂಬಲಿಸಬೇಕಿದೆ ಎಂದರು. ವಿವಿಧ ಸಂಘಟನೆಯಿಂದ ಪ್ರೊ.ರೂಪೇಶ ಪುತ್ತೂರುರನ್ನು ಸನ್ಮಾನಿಸಲಾಯಿತು.
ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಎಂ.ಆರ‌್ಹಾಳ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ, ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಕೃಷ್ಣ ಅಲೆಮಾರಿ, ಚನ್ನವೀರನಗೌಡ ಆರ‌್ಹಾಳ ಇತರರಿದ್ದರು.