ಗಂಗಾವತಿ ಎಚ್‌ಆರ್‌ಜಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಸಿ ನೂತನ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ನಾಗಪ್ಪ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಅವರನ್ನು ಪಕ್ಷದ ಮೂಲ ಕಾರ್ಯಕರ್ತರು ಮತ್ತು ಮುಖಂಡರು ಸನ್ಮಾನಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಉದ್ಯಮಿ ಕೆ.ಕಾಳಪ್ಪ, ಪ್ರಮುಖರಾದ ರಾಜಶೇಖರ್ ಮುಷ್ಟೂರು, ರಾಮಕೃಷ್ಣ ಇತರರಿದ್ದರು.
- ಮೌನಕ್ಕೆ ಜಾರಿದ ಮಾಜಿ ಸಚಿವ
- ಗಂಗಾವತಿ ಡಿಸಿಸಿ ಅಧ್ಯಕ್ಷರ ಬದಲಾವಣೆ ಬಳಿಕ ಬೆಳವಣಿಗೆ
ಗಂಗಾವತಿ; ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬದಲಾವಣೆಯಾಗುತ್ತಿದ್ದಂತೆ ಹಳೇ ಮತ್ತು ಮೂಲ ಕಾಂಗ್ರೆಸಿಗರು ಮುನ್ನೆಲೆಗೆ ಬಂದಿದ್ದು, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಸಂಕಲ್ಪ ಕೈಗೊಂಡರು. ಜಿಲ್ಲೆಯಲ್ಲಿ 2004ರವರೆಗೂ ಕಾಂಗ್ರೆಸ್ ಅಧಿಪತ್ಯ ಸಾಧಿಸಿದ್ದು, ನಂತರ ಪಕ್ಷದ ಆಂತರಿಕ ಕಚ್ಚಾಟದಿಂದ ಅಸ್ತಿತ್ವ ಕಳೆದುಕೊಂಡಿತ್ತಲ್ಲದೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರಕ್ಕೆ ಬಂದಿಲ್ಲ. ಮೂರು ಗುಂಪುಗಳಾಗಿದ್ದರಿಂದ ಕಾರ್ಯಕರ್ತರು ಅತಂತ್ರರಾಗಿದ್ದು, ಸ್ವಪಕ್ಷೀಯರೇ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದರು. ಮೂಲ ಕಾಂಗ್ರೆಸ್ಸಿಗರು, ಇತರ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೆ, ಉಳಿದವರು ತಟಸ್ಥರಾಗಿದ್ದರು. ಡಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ ನೇಮಕವಾಗುತ್ತಿದ್ದಂತೆ ಹಳೇ ಮತ್ತು ಮೂಲಕ ಕಾಂಗ್ರೆಸಿಗರು ಪುನಃ ಮುನ್ನೆಲೆಗೆ ಬಂದಿದ್ದಾರೆ.
ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸಕ್ಕೆ ಆಗಮಿಸಿದ ಡಿಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ನಾಗಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ, ಪಕ್ಷವನ್ನು ಸಂಘಟಿಸಲಾಗುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಅಧಿಪತ್ಯ ಸಾಧಿಸಲಿದ್ದು, 2028ರ ಚುನಾವಣೆಯಲ್ಲೂ ಜಿಲ್ಲೆಯ ಎಲ್ಲ ಕ್ಷೇತ್ರ ಪಕ್ಷದ ಪಾಲಾಗಲಿವೆ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಡಿಸಿಸಿ ಅಧ್ಯಕ್ಷರ ಮೇಲಿದ್ದು, ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸ ಪಡೆಯುವಂತೆ ಸಲಹೆ ನೀಡಿದರು.
ಉದ್ಯಮಿ ಕೆ.ಕಾಳಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎ್.ಷಣ್ಮುಖಪ್ಪ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ನಾಗರಾಜ ನಂದಾಪುರ, ಪ್ರಮುಖರಾದ ರಾಜಶೇಖರ್ ಮುಷ್ಟೂರು, ರಾಮಕೃಷ್ಣ, ಎಂ.ಸರ್ವೇಶ, ಬಸವರಾಜ ಚಲುವಾದಿ ಇತರರಿದ್ದರು.
ತಂಗಡಗಿ-ಅನ್ಸಾರಿ ಬೆಂಬಲಿಗರು ಯುಟರ್ನ್: ಮಲ್ಲಿಕಾರ್ಜುನ ನಾಗಪ್ಪ ಡಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅನ್ಸಾರಿ ಮತ್ತು ತಂಗಡಗಿ ಬೆಂಬಲಿಗರು ಯುಟರ್ನ್ ಹೊಡೆದಿದ್ದಾರೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್ ಸೇರಿ ಇತರರು ಮಲ್ಲಿಕಾರ್ಜುನ ನಾಗಪ್ಪ ನಿವಾಸಕ್ಕೆ ತೆರಳಿ ಅಭಿನಂದಿಸಿದರು. ಡಿಸಿಸಿ ಅಧ್ಯಕ್ಷರ ಬ್ಯಾನರ್‌ನಲ್ಲಿ ಇಕ್ಬಾಲ್ ಅನ್ಸಾರಿ ೆಟೋಗೆ ಕೊಕ್ ನೀಡಿದ್ದು, ಬೆಂಬಲಿಗರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಕಾಂಗ್ರೆಸ್ ಮತ್ತು ಹೈಕಮಾಂಡ್ ವಿರುದ್ಧ ಅನ್ಸಾರಿ ಬೆಂಬಲಿಗರ ಟಾಕ್‌ವಾರ್ ಶುರುವಾಗಿದ್ದರೂ ಅನ್ಸಾರಿ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಪಕ್ಷದ ವೇದಿಕೆಯಲ್ಲಿ ಸರಿಪಡಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು.