ಕನಕಗಿರಿಯ ಕನಕಾಚಲಪತಿ ಜಾತ್ರೆ ಅಂಗವಾಗಿ ಶನಿವಾರ ಪುಷ್ಪಯಾಗ ಮೆರವಣಿಗೆ ಜರುಗಿತು. 
ಕೊಪ್ಪಳ

ಶ್ರೀ ಕನಕಾಚಲಪತಿ ಜಾತ್ರೋತ್ಸವಕ್ಕೆ ತೆರೆ

ಪ್ರಮುಖ ಮುಖ್ಯಾಂಶಗಳು

  • ಸಂಪನ್ನಗೊಂಡ ಪುಷ್ಪಯಾಗ
  • ಕನಕಗಿರಿ ಕನಕಾಚಲಪತಿ ಜಾತ್ರೆ
ಕನಕಗಿರಿ: ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಶ್ರೀ ಕನಕಾಚಲಪತಿ ಜಾತ್ರೋತ್ಸವ ಪುಷ್ಪಯಾಗದೊಂದಿಗೆ ಸಂಪನ್ನಗೊಂಡಿತು.
ಮಾ.2ರಂದು ಅಂಕುರಾರ್ಪಣದೊಂದಿಗೆ ಆರಂಭವಾದ ಜಾತ್ರೆ ನಿಮಿತ್ತ ಒಂದು ವಾರದವರೆಗೆ ವಿಶೇಷ ಉತ್ಸವಗಳು ನಡೆದವು. ಮಾ.9ರಂದು ಕಲ್ಯಾಣೋತ್ಸವ, 10ರಂದು ಗರುಡೋತ್ಸವ ಹಾಗೂ ಮಾ.11ರಂದು ಕನಕಾಚಲಪತಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಜಾತ್ರೆಯ ದಶಮಿ ಶನಿವಾರ ಪುಷ್ಪಯಾಗದ ಮೂಲಕ ಧಾರ್ಮಿಕ ಉತ್ಸವಗಳಿಗೆ ತೆರೆ ಎಳೆಯಲಾಯಿತು.
ಕನಕಾಚಲಪತಿ ದೇವಸ್ಥಾನದಿಂದ ತೇರಿನ ಹನುಮಪ್ಪ ದೇವಸ್ಥಾನದವರೆಗೆ ಪುಷ್ಪಾಮಂಟಪ ರೋಹಣ ಸಾಗಿತು. ವಿಶೇಷ ಪೂಜೆಯೊಂದಿಗೆ ಉತ್ಸವ ದೇಗುಲಕ್ಕೆ ಮರಳಿತು.
ಯಾಜ್ಞಿಕ ಪ್ರಜ್ವಲ್ ಹಾಗೂ ಅರ್ಚಕರಾದ ಮಧುಸೂದನ, ವಿಜಯಕುಮಾರ ಸಮ್ಮುಖದಲ್ಲಿ ಕನಕಾಚಲಪತಿ, ಶ್ರೀದೇವಿ, ಭೂದೇವಿಗೆ ವಿಶೇಷ ಪೂಜೆ, ಪುಷ್ಪಯಾಗ ನೆರವೇರಿದವು. ಉತ್ಸವ ಹಾಗೂ ರಥ ಕಟ್ಟಲು ಶ್ರಮಿಸಿದ ಕಾಮಾಟಿಗರಿಗೆ, ಚಿತ್ರಗಾರರಿಗೆ, ಬಡಿಗ ಹಾಗೂ ಕಮ್ಮಾರರಿಗೆ ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು.
ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಕನಕರೆಡ್ಡಿ ಮಹಲಿನಮನಿ, ಸುದರ್ಶನರೆಡ್ಡಿ, ಶಾಮಸಿಂಗ್ ರಜಪೂತ್, ಶರಣಬಸವರೆಡ್ಡಿ ಹುಲಿಹೈದರ, ಆಂಜನೇಯರೆಡ್ಡಿ ಚಿತ್ರಿಕಿ, ಅಯ್ಯನಗೌಡ ಅಳ್ಳಳ್ಳಿ, ಹನುಮೇಶ ಡಿಶ್ ಇತರರಿದ್ದರು.