ನವಲಿ ಸಮಾನಾಂತರ ಜಲಾಶಯದ ಯೋಜಿತ ನೆ.
- ನವಲಿ ಡ್ಯಾಂ ಅನುಷ್ಠಾನಕ್ಕೆ ಆಸಕ್ತಿ
- ತಾಂತ್ರಿಕ ಸಮಿತಿ ರಚನೆಗೆ ಸಿದ್ಧತೆ
- ಜಾರಿಗೆ ತ್ರಿವಳಿ ರಾಜ್ಯಗಳ ಶಪಥ
ಕೊಪ್ಪಳ : ರಾಜ್ಯದ ಪ್ರಮುಖ ನೀರಾವರಿ ಯೋಜನೆಗೆ 70 ವರ್ಷದಿಂದ ಆಸರೆಯಾಗಿರುವ ತುಂಗಭದ್ರಾ ಆಣೆಕಟ್ಟೆ ಹೂಳು ಸಂಗ್ರಹದಿಂದ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಕಳೆ ಕಳೆದುಕೊಂಡಿದ್ದ 33 ಕ್ರಸ್ಟ್ ಗೇಟ್ಗಳನ್ನು ಬದಲಾಯಿಸುವ ಮೂಲಕ ಸರ್ಕಾರ ಭವಿಷ್ಯ ಭದ್ರಗೊಳಿಸುವ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳು ಪ್ರದರ್ಶಿಸಿದ ಬದ್ಧತೆ ಸಾರ್ವಜನಿಕ ಮೆಚ್ಚುಗೆ ಗಳಿಸಿದೆ. ಇದೀಗ ಹೂಳು ತೆರವು, ನದಿ ಜೋಡಣೆ ಹಾಗೂ ನವಲಿ ಸಮಾನಾಂತರ ಜಲಾಶಯ ಅನುಷ್ಠಾನ ವಿಷಯದಲ್ಲೂ ಮಾತುಕತೆ ಮೂಲಕ ಪರಿಹಾರ ಸೂತ್ರ ಕಂಡುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದು ಆಶಾದಾಯಕ ಬೆಳವಣಿಗೆ.
132.473 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಒಂದು ನೀರಾವರಿ ವರ್ಷಕ್ಕೆ ಒಟ್ಟು 230 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಇದರದಲ್ಲಿ ರಾಜ್ಯಕ್ಕೆ 151.49 ಟಿಎಂಸಿ (ಶೇ.65.86), ಆಂಧ್ರ ಪ್ರದೇಶಕ್ಕೆ 72 ಟಿಎಂಸಿ (ಶೇ.31.30) ಹಾಗೂ ತೆಲಂಗಾಣಕ್ಕೆ 6.51 ಟಿಎಂಸಿ (ಶೇ.2.84) ನೀರು ಹಂಚಿಕೆಯಾಗಿದೆ. ರಾಜ್ಯದಲ್ಲಿ 9,26,824 ಎಕರೆ, ಆಂಧ್ರ&ತೆಲಂಗಾಣದಲ್ಲಿ 7,12,097 ಎಕರೆ ಒಟ್ಟು 16,38,921 ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ದೇಶದ ಆರ್ಥಿಕತೆ ವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಅದರಲ್ಲೂ ಉತ್ಕಷ್ಟ ಸೋನಾಮಸೂರಿ ಅಕ್ಕಿ ಬೆಳೆವ ಅಚ್ಚುಕಟ್ಟು ಪ್ರದೇಶವಾಗಿ ಗುರುತಿಸಿಕೊಂಡಿರುವುದು ಗಮನಾರ್ಹ.
ಆದರೆ, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಿದ ಕಾರಣ ನೀರು ಬಳಕೆ ಪ್ರಮಾಣ 230 ಟಿಎಂಸಿಯಿಂದ 212 ಟಿಎಂಸಿ ಅಡಿಗೆ ಕುಸಿದಿದೆ. 2008ರಲ್ಲಿ ನಡೆದ ಸರ್ವೇಯಲ್ಲಿ ಡ್ಯಾಂನಲ್ಲಿ 31.618 ಟಿಎಂಸಿ ಸಿಲ್ಟ್ ಸಂಗ್ರಹವಾಗಿರುವುದು ದೃಢಪಟ್ಟಿದೆ. 100.855 ಟಿಎಂಸಿ ನೀರು ಭರ್ತಿಯಾಗುತ್ತಿದೆ ಎನ್ನಲಾಗಿತ್ತು. ಅದಾದ ಬಳಿಕ ನಡೆದ ಸರ್ವೇಗಳು ನೀರು ಲಭ್ಯತೆ ಪ್ರಮಾಣದಲ್ಲಿ ವ್ಯತ್ಯಾಸ ಮೂಡಿಸಿದೆ. ಸದ್ಯ 105 ಟಿಎಂಸಿ ಅಡಿ ಸಂಗ್ರಹ ತೋರಿಸಲಾಗುತ್ತಿದೆ.
ವಾರ್ಷಿಕ 60.415 ಟಿಎಂಸಿ ನಷ್ಟ
ಜಲಾಶಯ ನಿರ್ಮಾಣ ವೇಳೆ ಪ್ರತಿ ವರ್ಷ 0.427 ಟಿಎಂಸಿ ಹೂಳು ಸಂಗ್ರಹವಾಗಬಹುದೆಂದು ಲೆಕ್ಕ ಹಾಕಲಾಗಿತ್ತು. ವಾಸ್ತವವಾಗಿ 0.574 ಟಿಎಂಸಿಯಷ್ಟು ಹರಿದು ಬಂದಿದೆ. ಕೈಗಾರಿಕೆಗಳ ಹೆಚ್ಚಳ, ಗಣಿಗಾರಿಕೆ, ನೀರಿನ ಮೂಲಗಳ ದಡದಲ್ಲಿನ ಮಾನವನ ಅತಿಯಾದ ಕಾರ್ಯಚಟುವಟಿಕೆ ಪರಿಣಾಮ ಈ ಪ್ರಮಾಣ ಹೆಚ್ಚಾಗಿದೆ. ಇದರಿಂದ ನೀರಿನ ಲಭ್ಯತೆ ಕುಸಿದಿದ್ದು, ನೆರೆ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚಿನ ನಷ್ಟ ಸಂಭವಿಸುತ್ತಿದೆ. 212ಟಿಎಂಸಿಯಲ್ಲಿ 151.58 ಟಿಎಂಸಿ ನೀರು ಬಳಕೆಗೆ ಸಿಗುತ್ತಿದೆ. ಬಾಕಿ 60.415 ಟಿಎಂಸಿ ನಷ್ಟವಾಗುತ್ತಿದೆ. ಅದರಲ್ಲೂ ಕರ್ನಾಟಕಕ್ಕೆ 39.637 ಟಿಎಂಸಿ, ಆಂಧ್ರ&ತೆಲಂಗಾಣಕ್ಕೆ 20.778 ಟಿಎಂಸಿ ಜಲನಷ್ಟವಾಗುತ್ತಿದೆ.
ಕೊನೇ ಭಾಗಕ್ಕೆ ನಿರಂತರ ಅನ್ಯಾಯ
ನೀರಿನ ಕೊರತೆ ಕಾರಣ ಯೋಜಿತ ಪ್ರದೇಶಕ್ಕೆ ಸಮರ್ಪಕವಾಗಿ ಜಲ ಹರಿಯುತ್ತಿಲ್ಲ. ಅದರಲ್ಲೂ ಬೇಸಿಗೆ ಬೆಳೆ ಬಹುತೇಕ ನಷ್ಟ ತರುತ್ತಿದೆ. ಕೊನೇ ಭಾಗದ ರೈತರು ಕಳೆದೆರಡು ದಶಕದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಗಾರಿನಲ್ಲೂ ಕಟಾವು ಸಮಯದಲ್ಲೂ ಕೆಲವೊಮ್ಮೆ ಜೀವಜಲ ಕೊರತೆ ತೀವ್ರ ಭಾದಿಸುತ್ತಿದೆ. ಹೀಗಾಗಿ ಹೂಳು ತೆರವುಗೊಳಿಸುವಂತೆ ಸರ್ಕಾರದ ಮೇಲೆ ರೈತರು ನಿತಂತರ ಒತ್ತಡ ಹಾಕುತ್ತಿದ್ದಾರೆ. 2013ರಲ್ಲೇ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಮೂಲಕ ವ್ಯರ್ಥವಾಗುವ ನೀರು ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಯಿತು. ಅಂತಾರಾಜ್ಯ ಯೋಜನೆ ಕಾರಣ ನನೆಗುದಿಗೆ ಬೀಳುವಂತಾಗಿದೆ.
15,601 ಕೋಟಿ ರೂ. ಯೋಜನೆ
ನವಲಿ ಸಮಾನಾಂತರ ಜಲಾಶಯ ಸಂಬಂಧ ವಿಸತ ಯೋಜನಾ ವರದಿ ಕಳೆದ ನಾಲ್ಕು ವರ್ಷಗಳ ಹಿಂದೆ ಸಲ್ಲಿಕೆಯಾಗಿದೆ. 2021&22ರ ಯೋಜನೆಯಂತೆ ಅನುಷ್ಠಾನಕ್ಕೆ 15,601 ಕೋಟಿ ರೂ. ಬೇಕಾಗಲಿದೆ ಎಂದು ವರದಿ ಸಲ್ಲಿಕೆಯಾಗಿದೆ. ಕೊಪ್ಪಳ ತಾಲೂಕಿನ ನಿಂಗಾಪುರ ಬಳಿ ಹಿನ್ನೀರಿನಿಂದ 38.38 ಕಿ.ಮೀ. ಪ್ರವಾಹ ಹರಿವು ಕಾಲುವೆ ಮೂಲಕ ಕನಕಗಿರಿ ತಾಲೂಕಿನ ನವಲಿ ಜಲಾಶಯದಲ್ಲಿ 30.90 ಟಿಎಂಸಿ ನೀರು ಸಂಗ್ರಹಿಸುವುದು ಪ್ರಾಜೆಕ್ಟ್ನ ಮುಖ್ಯ ಉದ್ದೇಶ. 8,829 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯದ ಕಾಲುವೆ ಇದಾಗಿದ್ದು ಮಳೆಗಾಲದಲ್ಲಿ 40 ದಿನದಲ್ಲಿ ಜಲಾಶಯ ಭರ್ತಿ ಮಾಡಬಹುದು. ನವಲಿಯಿಂದ 10 ಕಿ.ಮೀ. ಉದ್ದದ ಕಾಲುವೆ ನಿರ್ಮಿಸಿ ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಮೈಲ್ 47ಕ್ಕೆ ಸಂಪರ್ಕಿಸುವ ಮೂಲಕ ರಾಯಚೂರು ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವ ಮೂಲಕ ಕೊರತೆ ನೀಗಿಸಲು ಯೋಜಿಸಲಾಗಿದೆ. ಡ್ಯಾಂ ನಿರ್ಮಾಣಕ್ಕೆ 19,250 ಎಕರೆ ಅವಶ್ಯವಿದ್ದು 20 ಗ್ರಾಮಗಳು ಮುಳುಗಡೆಯಾಗಲಿದೆ. 15 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ನಿರ್ಮಾಣಕ್ಕೆ 5&7 ವರ್ಷ ಬೇಕಿದ್ದು, ಸಂಗ್ರಹ ನೀರಿನಲ್ಲಿ ಕರ್ನಾಟಕಕ್ಕೆ ಶೇ.65 ಹಾಗೂ ನೆರೆ ರಾಜ್ಯಗಳಿಗೆ ಶೇ.65ರಷ್ಟು ನೀರು ಬಳಕೆಗೆ ದೊರೆಯಲಿದೆ.
ಹೂಳು ತೆರವಿಗಿದೆ ಯೋಜನೆ
ಒಂದೆಡೆ ಸಮಾನಾಂತರ ಅಣೆಕಟ್ಟೆ ನಿರ್ಮಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವಿದ್ದು ಮತ್ತೊಂದೆಡೆ ಹೂಳು ತೆರವಿಗೂ ಪೂರಕ ಯೋಜನೆಗಳಿವೆ. ನಿವೃತ್ತ ಸಿಇ ಎಸ್.ಎಚ್.ಮಂಜಪ್ಪ ನೀಡಿದ ಪೂರ್ವ ಯೋಜಿತಾ ವರದಿ ಅನುಷ್ಠಾನ ವಿಷಯವೂ ಸರ್ಕಾರದ ಪರಿಹಾರ ಪಟ್ಟಿಯಲ್ಲಿದೆ. ಟಿಬಿ ಡ್ಯಾಂ ಸಮುದ್ರಮಟ್ಟದಿಂದ 1,633 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 1,635 ಅಡಿವರೆಗೆ ಭೂಮಿ ಲಭ್ಯವಿದೆ. 80 ಕಿ.ಮೀ.ವರೆಗೆ ಹಿನ್ನೀರು ವ್ಯಾಪ್ತಿ ಇದ್ದು, ಅಲ್ಲೆಲ್ಲ ಹೂಳು ತೆರವು ಮಾಡಲು ಅವಕಾಶವಿದೆ. ಜಲಾಶಯ ಸುತ್ತಲೂ ಅಳೆದಲ್ಲಿ 3&4 ಸಾವಿರ ಎಕರೆಯಷ್ಟು ಜಾಗ ಲಭ್ಯವಾಗಲಿದ್ದು, ಅಲ್ಲಲ್ಲಿ ಹೂಳು ತೆರುವಗೊಳಿಸಿ ಬಂಡ್ ನಿರ್ಮಿಸಬಹುದು. ಗಿಡಗಳನ್ನು ನೆಟ್ಟು ಹೂಳು ಬರುವುದನ್ನು ತಡೆಯಬಹುದು. ಜತೆಗೆ ನದಿ ಸೇರುವ ಪ್ರಮುಖ ಹಳ್ಳ&ಕೊಳ್ಳಗಳಲ್ಲಿ ಚೆಕ್ಡ್ಯಾಂ ನಿರ್ಮಿಸಿದಲ್ಲಿ ಬರುವ ಹೂಳು ತಕ್ಕಮಟ್ಟಿಗೆ ಸಂಗ್ರಹಿಸುವ ಜತೆಗೆ ಅಂತರ್ಜಲ ವೃದ್ಧಿ, ನೀರಾವರಿ ಕ್ಷೇತ್ರ ಹೆಚ್ಚಳ ಮಾಡಲು ಅವಕಾಶವಿದೆ ಎನ್ನಲಾಗಿದೆ.
ಪಕ್ಷಬೇಧ ತೊರೆಯಲಿ
ಸಮಾನಾಂತರ ಜಲಾಶಯ ಅನುಷ್ಠಾನ ವಿಷಯದಲ್ಲಿ ಕಾಂಗ್ರೆಸ್&ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ. ಸಮಾನಾಂತರ ಜಲಾಶಯಗಳು, ಒಂದೇ ಜಲಾಶಯ ಮಾಡಬೇಕೆಂಬ ಚರ್ಚೆ ಇದೆ. 2021&22ರಲ್ಲಿನ ವರದಿಯಂತೆ ನವಲಿ ಬಳಿ ಮಾತ್ರ ಡ್ಯಾಂ ಕಟ್ಟುವ ಪ್ರಸ್ತಾಪವಿದೆ. ಅದಕ್ಕೂ ಹಿಂದೆ ಪ್ರವಾಹ ಹರಿವು ಕಾಲುವೆ ಮೂಲಕ ಹತ್ತಾರು ಚಿಕ್ಕ ಚಿಕ್ಕ ಕೆರೆಗಳು ತುಂಬಿಸುವ ಮೂಲಕ ನೀರಾವರಿ ಕ್ಷೇತ್ರ ಹೆಚ್ಚಳ ಹಾಗೂ ಕುಡಿವ ನೀರು ಸಮಸ್ಯೆ ಪರಿಹರಿಸಬಹುದೆಂದು ಹೇಳಲಾಗಿದೆ. ಹೀಗಾಗಿ ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜಕೀಯ ನಾಯಕರು ಪರಸ್ಪರ ಆರೋಪ&ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುವ ಬದಲು ಆಣೆಕಟ್ಟೆ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ.
"
ಟಿಬಿ ಡ್ಯಾಂ ಹೂಳು ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧವಿದೆ. ಆಂಧ್ರ&ತೆಲಂಗಾಣ ಸಿಎಂಗಳು ನವಲಿ ಸಮಾನಾಂತರ ಜಲಾಶ ಯೋಜನೆ ಅನುಷ್ಠಾನಕ್ಕೆ ಬೆಂಬಲ ಸೂಚಿಸಿವೆ. ಶ್ರೀಕೇಂದ್ರ ಜಲ ಆಯೋಗ ನೇತೃತ್ವದಲ್ಲಿ ಮೂರು ರಾಜ್ಯದ ಪ್ರತಿನಿಧಿಗಳ ಸಮಿತಿ ತಾಂತ್ರಿಕ ಕಾರ್ಯಸಾಧ್ಯತಾ ವರದಿ ಸಲ್ಲಿಸಲಿದೆ. ಅದರ ಅನುಸಾರ ಮುಂದಿನ ಕ್ರಮ ಜರುಗಿಸಲಾಗುವುದು.
— ಡಿ.ಕೆ.ಶಿವಕುಮಾರ್. ಸಿಎಂ.