ಕನಕಗಿರಿ ತಾಲೂಕಿನ ಜಾಲಿಹುಡಾ ಗ್ರಾಮಕ್ಕೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ ಭೇಟಿ ನೀಡಿ ಬೋರ್‌ವೆಲ್ ಪರಿಶೀಲಿಸಿದರು. ಆಡಳಿತಾಧಿಕಾರಿ ವಿರೂಪಾಕ್ಷಿ, ಪಿಡಿಒ ಬಸವರಾಜ ಸಂಕನಾಳ ಇತರರಿದ್ದರು. 
ಕೊಪ್ಪಳ

ಜಾಲಿಹುಡಾ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಬಳಕೆಗೆ ನೀರು ಪೂರೈಸುವ ಬೋರ್‌ವೆಲ್ ಪರಿಶೀಲನೆ
  • ಕನಕಗಿರಿ ಜಾಲಿಹುಡಾ ತಹಸೀಲ್ದಾರ್, ತಾಪಂ ಇಒ ಭೇಟಿ
ಕನಕಗಿರಿ: ಚರ್ಮ ಸಂಬಂಧಿತ ರೋಗಗಳು ಕಾಣಿಸಿಕೊಂಡ ತಾಲೂಕಿನ ಜಾಲಿಹುಡಾ ಗ್ರಾಮಕ್ಕೆ ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಗ್ರಾಪಂ ಆಡಳಿತಾಧಿಕಾರಿ ವಿರೂಪಾಕ್ಷಿ, ಪಿಡಿಒ ಬಸವರಾಜ ಸಂಕನಾಳ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮಸ್ಥರಿಗೆ ಬಳಕೆಗೆ ಮಾತ್ರ ಪೂರೈಕೆಯಾಗುತ್ತಿರುವ ನೀರಿನ ಬೋರ್‌ವೆಲ್ ತಿಪ್ಪೆಗುಂಡಿಯಲ್ಲಿದ್ದು, ಈ ನೀರಿನಿಂದಲೇ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿತ್ತು. ಈ ಕುರಿತು ಫೆ.2 ರಂದು ಜಾಲಿಹುಡಾ ಜನರಿಗೆ ಚರ್ಮರೋಗದ ಕಾಟ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ಧಿಕಾರಿಗಳು ಸ್ಥಳಕ್ಕೆ ತೆರಳಿ, ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಈ ಬಗ್ಗೆ ಗ್ರಾಮಸ್ಥರಾದ ಕನಕಪ್ಪ ಮಮ್ಮಾಳಿ, ನಿಂಗಪ್ಪ ಪ್ರತಿಕ್ರಿಯಿಸಿ, ಬೋರ್‌ವೆಲ್ ಇರುವ ಜಾಗ ಮೊದಲು ತಗ್ಗುಪ್ರದೇಶವಾಗಿದ್ದು, ಇದೀಗ ಸಮತಟ್ಟಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದಕ್ಕಾಗಿ ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದೆವು. ಆದರೆ, ಗ್ರಾಮದ ಹಲವರಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಈ ನೀರಿನ ಬಳಕೆಯಿಂದಲೇ ಎನ್ನುವ ಅನುಮಾನವಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ನೀರು ಬಳಕೆಗೆ ಯೋಗ್ಯವಿದೆಯೋ ಇಲ್ಲವೋ ಎನ್ನುವುದನ್ನು ತಪಾಸಣೆ ಮಾಡಿಸುವಂತೆ ಪಿಡಿಒ ಬಸವರಾಜ ಸಂಕನಾಳಗೆ ತಹಸೀಲ್ದಾರ್ ಸೂಚಿಸಿದರು.
ತಪಾಸಣೆ: ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಗ್ರಾಮಕ್ಕೆ ಆಗಮಿಸಿದ್ದು, ಚರ್ಮರೋಗ ಕುರಿತು ತಪಾಸಣೆ ನಡೆಸಿದ್ದಾರೆ. ನೀರು, ಅನೈರ್ಮಲ್ಯ, ಆಹಾರದಿಂದಲೂ ಈ ರೀತಿಯಾದ ಚರ್ಮರೋಗ ಬರುವ ಸಾಧ್ಯತೆಗಳಿವೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಅವರ ಗಮನಕ್ಕೆ ತಂದರು.