ಕೊಪ್ಪಳದಲ್ಲಿ ನಡೆದ ಪರ್ಯಾಯ ಬೆಳೆ ಯೋಜನೆ ಮತ್ತು ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ಗೊಬ್ಬರಗಳ ಕಾರ್ಯಾಗಾರವನ್ನು ಡಿಸಿ ಡಾ. ಸುರೇಶ ಬಿ. ಇಟ್ನಾಳ ಉದ್ಘಾಟಿಸಿದರು. ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಎ.ಬಿ. ಪಾಟೀಲ್​, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ, ಜಿ.ಡಿ. ಕೃಮೂರ್ತಿ ಇದ್ದರು. 
ಕೊಪ್ಪಳ

ಅಧಿಕಾರಿಗಳು ಕಚೇರಿಗೆ ಸೀಮಿತವಾಗದಿರಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಎಚ್ಚರಿಕೆ
  • ಪರ್ಯಾಯ ಬೆಳೆ ಜಾಗೃತಿ ಕಾರ್ಯಗಾರ
ಕೊಪ್ಪಳ : ಕೃಷಿ ಅಧಿಕಾರಿಗಳು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಬರದ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ. ರೈತರಲ್ಲಿ ಪರ್ಯಾಯ ಬೆಳೆ ಬೆಳೆವ ಕುರಿತು ಜಾಗೃತಿ ಮೂಡಿಸಬೇಕು. ಕೇವಲ ಕಚೇರಿಗೆ ಸೀಮಿತವಾಗದೆ ಕ್ಷೇತ್ರ ಭೇಟಿ ನೀಡಿ ಎಂದು ಡಿಸಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದರು.
ಜಿ.ಪಂ ಜೆ.ಎಚ್​. ಪಟೇಲ್​ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪರ್ಯಾಯ ಬೆಳೆ ಯೋಜನೆ ಮತ್ತು ರಸಗೊಬ್ಬರ ಕೊರತೆ ನಿವಾರಣೆಗೆ ಪರ್ಯಾಯ ಗೊಬ್ಬರಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 2,48,000 ಹೆಕ್ಟೇರ್​ ಬಿತ್ತನೆಯಾಗಬೇಕಿತ್ತು. ಮಳೆ ಅಭಾವದಿಂದ ಕೇವಲ ಶೇ. 49 ರಷ್ಟು ಮಾತ್ರ ಬಿತ್ತನೆಯಾಗಿದೆ. ತುಂಗಭದ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಸೀಮಿತವಾಗಿದ್ದು, ಕೇವಲ 26 ಟಿಎಂಸಿ ಲಭ್ಯವಿದೆ. ರೈತರು ಹೆಚ್ಚಿನ ನೀರು ಬೇಡುವ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಗಳನ್ನು ಬೆಳೆವಂತೆ ತಜ್ಞರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಫಸಲ್​ ಭೀಮಾ ಯೋಜನೆಯಡಿ, ಜುಲೈ 15ರ ನಂತರ ವಿಮೆ ನೋಂದಣಿಯನ್ನು ಚುರುಕುಗೊಳಿಸಲಾಗಿದ್ದು, ಪ್ರಸ್ತುತ 65,000 ರೈತರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರಿದ್ದು, ಬಿತ್ತನೆ ತಡೆಯಲ್ಪಟ್ಟ ಪ್ರದೇಶಗಳಲ್ಲೂ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕಿದೆ ಎಂದು ತಿಳಿಸಿದು.
ಮಳೆ ಅಭಾವದಿಂದಾಗಿ ಸದ್ಯ ಬಿತ್ತನೆಯಾಗಿರುವ ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆ ಸರಿಯಾದ ಪ್ರಮಾಣದಲ್ಲಿ ಬೆಳೆದಿಲ್ಲ. ಇವುಗಳಲ್ಲಿ ಹೆಚ್ಚಿನ ಭಾಗ ಕೇವಲ ಮೇವಿಗಷ್ಟೇ ಬಳಕೆಯಾಗುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳ ನಿರ್ದೇಶನದಂತೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೇ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಂಡವಾಗಿ ಕ್ಷೇತ್ರ ಭೇಟಿ ಕೈಗೊಂಡು ರೈತರಿಗೆ ಜಾಗೃತಿ ಜತೆಗೆ ಅಗತ್ಯ ನೆರವು ನೀಡಬೇಕು. ಈ ಬಗ್ಗೆ ಕೃಷಿ ಮತ್ತು ಪಶು ಸಖಿಯರ ಪಾತ್ರವು ಮುಖ್ಯವಾಗಿದೆ ಎಂದರು.
ರೈತರು ಬೆಳೆ ವಿಮೆ ಮಾಡಿಸಲು ವೇಗ ಹೆಚ್ಚಿಸಲಾಗಿದೆ.ಎಲ್ಲಾ ರೈತರೆಲ್ಲರೂ ಸೌಲಭ್ಯ ಪಡೆಯಬೇಕು.ಪಿಎಂ ವಿಕಸಿತ ಭಾರತ- ಜಿಲ್ಲೆ ಯೋಜನೆಯಡಿ ಜಲಾನಯನ ಅಭಿವೃದ್ಧಿ, ಹಸಿರು ಹೊದಿಕೆ ಹಾಗೂ ಕೊಳವೆಬಾವಿ ಮರುಪೂರಣ ಕಾರ್ಯಗಳಿಗೆ ಸಿಎಸ್​ಆರ್​ ನಿಧಿ ಬಳಸಿಕೊಳ್ಳಲು ಸುಮಾರು 100 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ಗೆ ಕೆಕೆಆರ್​ಡಿಬಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದ್ದು, ಖಾಸಗಿ&-ಸಾರ್ವಜನಿಕ ಸಹಭಾಗಿತ್ವದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಟೆಂಡರ್​ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ರೈತರಿಗೆ ಕೃಷಿ ವಿವಿಗಳು, ಕೃಷಿ ವಿಜ್ಞಾನ ಕೇಂದ್ರಗಳ ಸಂಶೋಧನೆಗಳು ಮತ್ತು ತಂತ್ರಜ್ಞಾನ ನೇರವಾಗಿ ತಲುಪುವಂತೆ "ಲ್ಯಾಬ್​ ಟು ಲ್ಯಾಂಡ್​' ನಿರಂತರ ತರಬೇತಿ ಹಾಗೂ ಮಾಹಿತಿ ವಿನಿಮಯ ನಡೆಯಬೇಕೆಂದು ತಿಳಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಎ.ಬಿ. ಪಾಟೀಲ್​ ಮಾತನಾಡಿ, ಹವಾಮಾನ ವೈಪರೀತ್ಯ ಹಾಗೂ ರಾಸಾಯನಿಕ ಗೊಬ್ಬರಗಳ ಕೊರತೆಯಂತಹ ಸವಾಲುಗಳನ್ನು ಎದುರಿಸಲು ರೈತರು ಪರ್ಯಾಯ ಬೆಳೆ ಯೋಜನೆ ಹಾಗೂ ಪರ್ಯಾಯ ಗೊಬ್ಬರಗಳ ಬಳಕೆಗೆ ಮುಂದಾಗಬೇಕು. 1968ರಲ್ಲಿ ಸ್ಥಾಪನೆಯಾದ ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ರೈತರಿಗೆ ವೈಜ್ಞಾನಿಕ ಕೃಷಿ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ, ತೋಟಗಾರಿಕಾ ಜಂಟಿ ನಿರ್ದೇಶಕ ಕೃಷ್ನ ಉಕ್ಕುಂದ, ಪ್ರಮುಖರಾದ ಡಾ. ಭದ್ರಿಪ್ರಸಾದ ಪಿ ಆರ್​., ಡಾ. ಎಂ.ಬಿ.ಪಾಟೀಲ್​, ಸಲಾಹುದ್ದೀನ ಮಾನ್ವಿ, ಡಾ. ಪಿ.ಎಂ. ಮಲ್ಲಯ್ಯ, ಶ್ರೀನಿವಾಸ, ಸತೀಶ್​, ಶಿವಣ್ಣ ಮೂಲಿಮನಿ, ಡಾ. ಪ್ರಭುಲಿಂಗ ಜಿ., ವೀರಣ್ಣ ಕಮತರ ಇತರರಿದ್ದರು.
"

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿತ್ತನೆ ವೈಫಲ್ಯ ಅಥವಾ ಮೊಳಕೆ ಹಂತದಲ್ಲೇ ಬೆಳೆ ನಾಶವಾದರೆ ರೈತರಿಗೆ ಬೆಳೆ ವಿಮಾ ಮೊತ್ತದ ಶೇ.25ರಷ್ಟು ಮುಂಗಡ ಪರಿಹಾರ ದೊರೆಯಲಿದೆ. ರೈತರು ಬೆಳೆ ದರ್ಶಕ ಆ್ಯಪ್​ನಲ್ಲಿ ಬೆಳೆ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದ ವಿಮೆ ಹಾಗೂ ಬರ ಪರಿಹಾರ ಸಕಾಲದಲ್ಲಿ ದೊರೆಯಲು ನೆರವಾಗುತ್ತದೆ.

— ಜಿ.ಡಿ. ಕೃಮೂರ್ತಿ, ಜಂಟಿ ಕೃಷಿ ನಿರ್ದೇಶಕರು, ಕೊಪ್ಪಳ.