ಗಂಗಾವತಿಯ ಜುಲಾಯಿನಗರ ಬೈಪಾಸ್ ರಸ್ತೆಯ ತಿಪ್ಪೆಗುಂಡಿಯಲ್ಲಿದ್ದ ಪೌಷ್ಟಿಕ ಆಹಾರದ ಪೌಚ್‌ಗಳು.
ಗಂಗಾವತಿ: ಇಲ್ಲಿನ ಜುಲಾಯಿನಗರದ ಬೈಪಾಸ್ ರಸ್ತೆ ತಿಪ್ಪೆಗುಂಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪೌಷ್ಟಿಕ ಆಹಾರ ಪೌಚ್‌ಗಳು ಮಂಗಳವಾರ ಪತ್ತೆಯಾಗಿವೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಮಕ್ಕಳು, ಬಾಣಂತಿಯರು ಮತ್ತು ಕಿಶೋರಿಯರಿಗಾಗಿ ಮಿಲೆಟ್ ಲಡ್ಡು, ಪುಷ್ಟಿ, ಸಾರವರ್ಧಕ, ಸಾಂಬರ್ ಪುಡಿಯನ್ನೊಳಗೊಂಡ ಪೌಚ್‌ಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸಿಡಿಪಿಒ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ಲಾನುಭವಿಗಳಿಗೆ ಉಚಿತ ನೀಡಬೇಕು. ಆದರೆ ಪೌಷ್ಟಿಕ ಆಹಾರಗಳನ್ನೊಳಗೊಂಡ ಪೌಚ್‌ಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿಟ್ಟು ತಿಪ್ಪೆಗುಂಡಿಗೆ ಹಾಕಲಾಗಿದೆ. ಬಳಕೆ ಅವಧಿ ಮುಗಿದಿದ್ದರೇ ಕಚೇರಿಗೆ ವಾಪಸ್ ರವಾನಿಸಬೇಕಿದ್ದು, ಅದಕ್ಕೆ ತಕ್ಕಂತೆ ದಾಖಲೆಗಳನ್ನಿಡಬೇಕು. ಸಕಾಲಕ್ಕೆ ಲಾನುಭವಿಗಳಿಗೆ ನೀಡದಿದ್ದರಿಂದಲೇ ಪೌಚ್‌ಗಳನ್ನು ತಿಪ್ಪೆಗುಂಡಿಗಳಿಗೆ ಹಾಕಿರಬೇಕೆಂದು ಶಂಕಿಸಲಾಗಿದೆ.
ತಿಪ್ಪೆಗುಂಡಿಯಲ್ಲಿದ್ದ ಪೌಷ್ಟಿಕ ಆಹಾರದ ಪೌಚ್‌ಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷ ಹನುಮಂತ ಕಂಬಾರ್ ನೇತೃತ್ವದ ಪದಾಧಿಕಾರಿಗಳು ಸಿಡಿಪಿಒ ಇಲಾಖೆ ಗಮನಕ್ಕೆ ತಂದಿದ್ದಾರೆ. ಘಟನೆಯನ್ನು ತನಿಖೆಗೊಳಪಡಿಸಬೇಕಿದ್ದು, ಸರ್ಕಾರಿ ಉಚಿತ ಯೋಜನೆಗಳನ್ನು ಬಡವರಿಗೆ ತಲುಪಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾಹಿತಿಗೆ ಸಿಡಿಪಿಒ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ.