- ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿಕೆ
- ಕೊಪ್ಪಳ ತಾಲೂಕಿನ ಬನ್ನಿಕುಂಟದಲ್ಲಿ ಭೂಮಿ ನಿಗದಿ
ಗಂಗಾವತಿ: ಮಾನವ, ಕೃಷಿ ಮತ್ತು ಜೀವ ವೈವಿಧ್ಯಕ್ಕೆ ಮಾರಕವಾದ ಜಿಲ್ಲೆಯಲ್ಲಿ ಅಣುಸ್ಥಾವರ ಯೋಜನೆಗೆ ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದ್ದು, ಅಗತ್ಯಬಿದ್ದರೆ ಜನಾಂದೋಲನ ರೂಪಿಸಲಾಗುವುದು ಎಂದು ಮಾಜಿ ಎಂಎಲ್ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಹೇಳಿದರು.
ನಗರದ ಎಚ್‌ಆರ್‌ಜಿ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಕೈಗಾದಲ್ಲಿ ಅಣುಸ್ಥಾವರ ಇದ್ದರೂ, ಮತ್ತೊಂದು ಅಣು ಸ್ಥಾವರಕ್ಕಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕೊಪ್ಪಳ ತಾಲೂಕಿನ ಬನ್ನಿಕುಂಟ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದ್ದು, ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡಿದೆ. ಅಣುಸ್ಥಾವರದಿಂದ ಮಾನವ, ಕೃಷಿ ಮತ್ತು ಜೀವ ವೈವಿಧ್ಯತೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದಕ್ಕೆ ಕೈಗಾ ಸಾಕ್ಷಿಯಾಗಿದ್ದು, ಮಾರಕವಾದ ಅಣುಸ್ಥಾವರ ಯೋಜನೆ ಜಿಲ್ಲೆಯಲ್ಲಿ ಬೇಡ. ಕೇಂದ್ರ ಸರ್ಕಾರ ಗುರುತಿಸಿರುವ ಬನ್ನಿಕುಂಟದಲ್ಲಿ 8ಸಾವಿರ ಎಕರೆ ಕಂದಾಯ ಮತ್ತು ಅರಣ್ಯ ಭೂಮಿಯಿದ್ದು, ಅಪರೂಪದ ಜೀವ ವೈವಿಧ್ಯಗಳು ವಾಸಿಸುತ್ತಿವೆ. ಸನಿಹದಲ್ಲಿ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿ ಮತ್ತು ಶೀಘ್ರದಲ್ಲಿ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಲಿರುವ ಮೋರೆರ್ ಬೆಟ್ಟ ಉದ್ದೇಶಿತ ಪ್ರದೇಶದ ಕೂಗಳತೆಯಲ್ಲಿದೆ. ಇನ್ನೂ ಐತಿಹಾಸಿಕ ಹಿನ್ನೆಲೆಯಲ್ಲಿ ಗಂಡುಗಲಿಕುಮಾರರಾಮ ಸೇರಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು, ಪ್ರಾಗೈತಿಹಾಸಿಕ ಬೃಹತ್ ಶಿಲಾಯುಗದ ನೆಲೆಯ ಮೋರೆರ್ ಶಿಲಾಸಮಾಧಿಗಳು, ಗವಿ ಚಿತ್ರಗಳಿವೆ. ಅಣುಸ್ಥಾವರ ಯೋಜನೆ ಅನುಷ್ಠಾನಗೊಂಡರೆ ಇತಿಹಾಸ, ಪರಿಸರ ಮತ್ತು ಸಂಸ್ಕೃತಿ ಮೇಲೆ ಪರಿಣಾಮ ಬೀರಲಿದ್ದು, ಕೃಷಿ ಚಟುವಟಿಕೆ ಮತ್ತು ಮನುಸಂಕುಲದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದರು.
ಹೋರಾಟ: ಈ ಹಿಂದೆ ಹಿರೇಬೆಣಕಲ್, ಅರಸನಕೇರಿ ವ್ಯಾಪ್ತಿಯಲ್ಲಿ ಅಣುಸ್ಥಾವರ ಯೋಜನೆಗೆ ಜಾಗ ನಿಗದಿಪಡಿಸಿದಾಗ ಗ್ರಾಮಸ್ಥರ ಸಹಯೋಗದೊಂದಿಗೆ ಹೋರಾಟ ರೂಪಿಸಿದ್ದರಿಂದ ಪ್ರಸ್ತಾವನೆಯನ್ನು ಸರ್ಕಾರ ಕೈಬಿಟ್ಟಿತ್ತಲ್ಲದೇ, ವಿಶೇಷ ಸಂಪುಟ ಸಭೆಯ ಮೂಲಕ ಯೋಜನೆ ವಿರೋಧಿಸಿತ್ತು. ಯೋಜನೆ ಕೈಬಿಟ್ಟ ಬಗ್ಗೆ ಸಂದಿಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಬಹಿರಂಗಪಡಿಸಿದ್ದರು. ಪೂನಾ ಯೋಜನೆ ಮುನ್ನೆಲೆಗೆ ಬಂದಿದ್ದು, ದುರದೃಷ್ಟಕರ. ಯೋಜನೆ ಅನುಷ್ಠಾನಗೊಳ್ಳದಂತೆ ಜಿಲ್ಲೆಯಾದ್ಯಾಂತ ಹೋರಾಟ ಹಮ್ಮಿಕೊಳ್ಳಲಾಗುವುದು. ಪರಿಸರವಾದಿಗಳ ನಿಯೋಗದೊಂದಿಗೆ ಸಿಎಂ ಭೇಟಿಯಾಗಿ ಮನವರಿಕೆ ಮಾಡಲಾಗುವುದು.ಅಗತ್ಯಬಿದ್ದರೆ ಕೊಪ್ಪಳ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದರು. ಪ್ರಮುಖರಾದ ರಾಜಶೇಖರ್ ಮುಷ್ಟೂರು, ಹನುಮಂತರಾಜ, ಸುರೇಶ ಗೌರಪ್ಪ ಇತರರಿದ್ದರು.
ಅಣುಸ್ಥಾವರ ಅನುಷ್ಠಾನದಿಂದ ಉದ್ದೇಶಿತ ಪ್ರದೇಶದಿಂದ 50ಕಿ.ಮೀ ವ್ಯಾಜ್ಯದ ಭೂಪ್ರದೇಶದ ಮೇಲೆ ಪರಿಣಾಮ ಬೀರಲಿದ್ದು, ಮಾನವ ಸಂಕುಲಕ್ಕೂ ಪೆಟ್ಟು ಬೀಳಲಿದೆ. ಕೇಂದ್ರ ಪುರಸ್ಕೃತ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಲ್ಲ.