ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ಯಲಬುರ್ಗಾ ತಾಲೂಕಿನ ಕಲ್ಲೂರಿನಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕಾಧ್ಯಕ್ಷ ವಿಜಯಕುಮಾರ ಬಳಿಗಾರ, ಅವಳಿ ತಾಲೂಕಿನ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಸುರೇಶ ದೇಸಾಯಿ, ಎಂಐಎಸ್ ಸಂಯೋಜಕ ಗಿರೀಶ್, ಐಇಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಶರಣಪ್ಪ ಹಾಳಕೇರಿ ಇತರರಿದ್ದರು. 
ಕೊಪ್ಪಳ

ಸೇವಾಭದ್ರತೆ ಕುರಿತು ಸದನದಲ್ಲಿ ಚರ್ಚಿಸಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ
ಯಲಬುರ್ಗಾ: ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೇವಾಭದ್ರತೆ ಒದಗಿಸುವ ಕುರಿತು ಸದನದಲ್ಲಿ ಚರ್ಚಿಸುವಂತೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮಂಗಳವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಲಾಯಿತು.
ನರೇಗಾ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿ 5000 ಸಿಬ್ಬಂದಿ ವಿವಿಧ ಸ್ಥರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನೌಕರರ ಕುಟುಂಬಗಳು ಸದ್ಯ ತ್ರಿಶಂಕು ಸ್ಥಿತಿ ಎದುರಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ನಮಗೆ ನಿಯಮಿತವಾಗಿ ವೇತನ ಪಾವತಿ ಆಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ, ವೈದ್ಯಕೀಯ ಖರ್ಚು, ಸಾಲಗಳ (ಇಎಂಐ) ಮರುಪಾವತಿ, ಮಕ್ಕಳ ಶಾಲಾ-ಕಾಲೇಜು ಶುಲ್ಕ ಕಟ್ಟುವುದು ಸೇರಿದಂತೆ ಇತರ ಖರ್ಚು ನಿಭಾಯಿಸಲು ತೊಂದರೆ ಅನುಭವಿಸುವಂತಾಗಿದೆ ಎಂದು ನೌಕರರು ಮನವಿ ಮಾಡಿದರು.
ಬಳಿಕ ಬಸವರಾಜ ರಾಯರಡ್ಡಿ ಮಾತನಾಡಿ, ಈಗಾಗಲೇ ನರೇಗಾ ಯೋಜನೆ ಬದಲಾವಣೆ ಮಾಡಿರುವ ಕುರಿತು ಸಮಗ್ರ ಚರ್ಚೆ ಮಾಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅಧಿವೇಶನ ಕರೆದಿದ್ದಾರೆ. ನೌಕರರು ಹಾಗೂ ಕೂಲಿಕಾರರ ಕುರಿತು ಜ.22 ರಿಂದ 31ರವರೆಗೆ ಸಮಗ್ರವಾಗಿ ಚರ್ಚಿಸಲಾಗುವುದು. ಆ ಸಂದರ್ಭದಲ್ಲಿ ನರೇಗಾ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ತಾಲೂಕಾಧ್ಯಕ್ಷ ವಿಜಯಕುಮಾರ ಬಳಿಗಾರ, ಅವಳಿ ತಾಲೂಕಿನ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಸುರೇಶ ದೇಸಾಯಿ, ಎಂಐಎಸ್ ಸಂಯೋಜಕ ಗಿರೀಶ್, ಐಇಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕರಾದ ರಮೇಶ ಹಿರೇಮನಿ, ಕಿರಣಕುಮಾರ, ನಾಗರಾಜ ಹಳ್ಳಿ, ಹುಸೇನ್ ಪಾಷಾ, ಸಂಗಮೇಶ, ಚೇತನ ಇದ್ದರು.