- ಅಂಗನವಾಡಿ ಆಹಾರ ಬಿಲ್ ವ್ಯತ್ಯಾಸ
- ಆಹಾರ ಆಯೋಗ ಕ್ರಮ
ಕೊಪ್ಪಳ : ಜಿಲ್ಲೆಯಲ್ಲಿ ಮೂರು ದಿನ ವಿವಿಧೆಡೆ ಭೇಟಿ ನೀಡಿ ಆಹಾರ ಭದ್ರತೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. ಅಂಗನವಾಡಿ ಮಕ್ಕಳಿಗೆ ವಿತರಿಸಿದ ಆಹಾರ ಬಿಲ್ಗಳಲ್ಲಿ ವ್ಯತ್ಯಾಸ ಕಂಡಿದ್ದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ನಿರ್ಲಕ್ಷ್ಯವಹಿಸಿದ ಸಿಡಿಪಿಒ ರೋಹಿಣಿ ಕೊಟಗಾರಗೆ ನೋಟಿಸ್ ಜಾರಿಗೊಳಿಸಿದ್ದಾಗಿ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಕೊಪ್ಪಳ ಜಿಲ್ಲೆಗೆ ಬಂದೆವು. ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿ, ಉಗ್ರಾಣ ಸೇರಿ ವಿವಿಧೆಡೆ ಭೇಟಿ ನೀಡಿದ್ದೇವೆ. ಸಾಕಷ್ಟು ಲೋಪದೋಷಗಳು ಕಂಡುಬಂದಿವೆ. ಎಲ್ಲವನ್ನು ದಾಖಲಿಸಿಕೊಂಡಿದ್ದ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಸಮರ್ಪಕವಾಗಿರದಲಿದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು.
ಅಂಗನವಾಡಿಗೆ ಪೂರೈಸಿದ ಆಹಾರ ಸಾಮಗ್ರಿಗಳ ವಿವರ ಪರಿಶೀಲಿಸಿದಾಗ ವ್ಯತ್ಯಾಸ ಕಂಡುಬಂದಿದೆ. ಸರಿಯಾದ ಬಿಲ್ಗಳಿಲ್ಲ. ವಿತರಣೆ ಮಾಡಿದ ಆಹಾರ, ಮಕ್ಕಳ ಸಂಖ್ಯೆ, ಬಿಲ್ಗಳಲ್ಲಿ ಗೋಲ್ಮಾಲ್ ಅನುಮಾನ ವ್ಯಕ್ತವಾಗಿದೆ. ತಕ್ಷಣ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತುಗೊಳಿಸಲು ಸೂಚಿಸಲಾಗಿದೆ. ಮೇಲಧಿಕಾರಿಗಳು ಬಿಲ್ ಮಾಡಿದ್ದು, ಸರಿಯಾದ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಸಿಡಿಪಿಒ ರೋಹಿಣಿ ಕೊಟಗಾರಗೆ ನೋಟಿಸ್ ನೀಡಿದ್ದು ಸಮಜಾಯಿಷಿ ಕೇಳಲಾಗಿದೆ ಎಂದು ವಿವರಿಸಿದರು.
ಉಗ್ರಾಣದಲ್ಲಿ 8 ಕ್ವಿಂಟಾಲ್ ಧಾನ್ಯ ವ್ಯತ್ಯಾಸ ಕಂಡುಬಂದಿದೆ. 2,912 ಕ್ವಿಂಟಾಲ್ ಸೀಜ್ ಮಾಡಿದ ಅಕ್ಕಿ ಇದ್ದು, ಅದನ್ನು ವಿಲೇವಾರಿಗೊಳಿಸಿ ಹಣ ಡೆಪಾಸಿಟ್ಗೆ ನಿರ್ದೇಶಿಸಲಾಗಿದೆ. 790 ಕ್ವಿಂಟಾಲ್ ಗೋಧಿ ಕೆಟ್ಟಿದೆ. ಬಳಕೆ ಮಾಡದೇ ಹಾಗೆ ಬಿಟ್ಟರೆ ಹಾಳಾಗುತ್ತದೆ. ಅದರ ಬದಲು ಹಾಸ್ಟೆಲ್ಗಳಲ್ಲಿ ಗೋಧಿ ಬಳಸಿ ಮಾಡುವ ಆಹಾರ ಮಾಡಬೇಕು. ಚಪಾತಿ ಮಾಡುವ ಮಚಿನ್ ನೀಡುವಂತೆ ತಾಕೀತು ಮಾಡಲಾಗಿದೆ. ಪಡಿತರ ಅಕ್ರಮಕ್ಕೆ ಸಂಬಂಧಿಸಿದಂತೆ 31 ಕೇಸ್ ಆಗಿದ್ದು 1,400 ಕ್ವಿಂಟಾಲ್ ಪಡಿತರ ಸೀಜ್ ಮಾಡಿದ್ದಾರೆಂದು ಮಾಹಿತಿ ನೀಡಿದರು.
ಮಂಗಳೇಶ ಅಸೋಸಿಯೇಟ್ಸ್ ಟೆಂಡರ್ ರದ್ದು
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ರೋಗಿಗಳು ಮತ್ತವರ ಕಡೆಯವರು ನಮಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಪೂರೈಸಿದ ಆಹಾರ ಪದಾರ್ಥಗಳ ಲೆಕ್ಕವಿಲ್ಲ. ಮಂಗಳೇಶ ಅಸೋಸಿಯೇಟ್ಸ್ ಎಂಬವವರಿಗೆ ಟೆಂಡರ್ ನೀಡಿದ್ದು, ತಕ್ಷಣ ರದ್ದು ಮಾಡುವಂತೆ ವೈದ್ಯಕಿಯ ಅಧೀಕ್ಷಕರಿಗೆ ಸೂಚಿಸಲಾಗಿದೆ. ಆಹಾರ ಗುಣಮಟ್ಟ ಪರಿಶೀಲಿಸದ ನರ್ಸಿಂಗ್ ಸೂಪರಿಂಡೆಂಟ್ ಅವರನ್ನು ಒಂದು ತಿಂಗಳು ಕಡ್ಡಾಯ ರಜೆ ಮೇಲೆ ಕಳಿಸುವಂತೆ ನಿರ್ದೇಶಿಸಿದ್ದಾಗಿ ಅಧ್ಯಕ್ಷರು ತಿಳಿಸಿದರು.