ಗಂಗಾವತಿ ಠಾಣೆ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿದರು. ನಗರ ಪಿಐ ಪ್ರಕಾಶ ಆರ್. ಯಾತನೂರ್, ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಇತರರಿದ್ದರು. 
ಕೊಪ್ಪಳ

ಹಬ್ಬದ ನೆಪದಲ್ಲಿ ಸ್ವೇಚ್ಛಾಚಾರ ನಡೆಯಲ್ಲ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಎಚ್ಚರಿಕೆ
  • ಗಂಗಾವತಿ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ
ಗಂಗಾವತಿ: ಹಬ್ಬದ ನೆಪದಲ್ಲಿ ಅನ್ಯ ದೇಶದ ಧ್ವಜ ಮತ್ತು ೋಷಣೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ದೇಶದ್ರೋಹಿಗಳಿಗೆ ಭಾರತದಲ್ಲಿ ವಾಸಿಸಲು ಹಕ್ಕಿಲ್ಲ ಎಂದು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹೇಳಿದರು.
ಈದ್ ಮಿಲಾದ್ ಹಬ್ಬದ ನಿಮಿತ್ತ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಬೇಕಿದ್ದು, ಪ್ರತಿ ಸಮುದಾಯ ಪಾಲ್ಗೊಳ್ಳುವ ರೀತಿಯಲ್ಲಿ ವ್ಯವಸ್ಥೆಯಾಗಬೇಕು. ಮೆರವಣಿಗೆಯಲ್ಲಿ ಡಿಜೆಗೆ ಅವಕಾಶವಿಲ್ಲ. ಅನ್ಯ ದೇಶದ ಧ್ವಜ ಪ್ರದರ್ಶನ, ೋಷಣೆ ಕೂಗುವಂತಿಲ್ಲ. ಕಾನೂನು ಬಾಹಿರ ಚಟುವಟಿಕೆಗಳು ಮತ್ತು ವರ್ತನೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮದೊಂದಿಗೆ ಪ್ರಕರಣ ದಾಖಲಿಸಲಾಗುವುದು. ಬೇರೆ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಮೆರವಣಿಗೆ ವ್ಯವಸ್ಥೆಗೊಳಿಸಬೇಕಿದ್ದು, ಸ್ವೇಚ್ಛಾಚಾರಕ್ಕೆ ಅವಕಾಶ ನೀಡಲ್ಲ. ಹಬ್ಬದ ಸಂದರ್ಭದಲ್ಲಿ ಅಗತ್ಯ ಬಂದೋಬಸ್ತ್, ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಪೊಲೀಸ್ ವ್ಯವಸ್ಥೆ ಮಾಡಲಿದ್ದು, ವಿದ್ಯುತ್ ದೀಪಾಲಂಕಾರ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಜೆಸ್ಕಾಂನಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕೆಂದು ತಿಳಿಸಿದರು.
ನಗರ ಪಿಐ ಪ್ರಕಾಶ ಆರ್.ಯಾತನೂರ್ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಹದ್ದುಮೀರಿ ವರ್ತಿಸುವ ಯುವಕರನ್ನು ಸಮುದಾಯದ ಮುಖಂಡರೇ ನಿಯಂತ್ರಿಸಬೇಕು. ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದರು.

ಮುಸ್ಲಿಂ ಮುಖಂಡ ಎಸ್.ಬಿ.ಖಾದ್ರಿ ಮಾತನಾಡಿ, ಆ.25ರಂದು ಧಾರ್ಮಿಕ ಸಭೆ ನಡೆಯಲಿದ್ದು, ಆ.26ರಂದು ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ, ಜೆಸ್ಕಾಂ ಎಇ ವಿಜಯಕುಮಾರ, ಸಂಚಾರ ಠಾಣೆ ಪಿಎಸ್‌ಐ ಇಸ್ಮಾಯಿಲ್‌ಸಾಬ್, ಎಎಸ್‌ಐ ಶಿವಶರಣಪ್ಪ, ವಿವಿಧ ಸಮುದಾಯದ ಪ್ರಮುಖರಾದ ಜವಳಗೇರಾ ಹುಸೇನ್‌ಪೀರಾ, ಜೋಗದ ಹನುಮಂತಪ್ಪ ನಾಯಕ, ಶಬ್ಬೀರ್ ಹುಸೇನ್, ದುರುಗಪ್ಪ ಇತರರಿದ್ದರು.