ಕುಷ್ಟಗಿ ತಾಲೂಕು ನಿಡಶೇಸಿ ಕೆರೆಯಲ್ಲಿ ಸ್ವಚ್ಛತಾ ಸೇವಾ ಕಾರ್ಯ ಹಾಗೂ ನಿಡಶೇಸಿ ಕೆರೆ ಹಾಗೂ ಉದ್ಯಾನವನ ಅಭಿವೃದ್ಧಿ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡ್ರ ಮಾತನಾಡಿದರು. ತಾಪಂ ಪಂಪಾಪತಿ ಇಒ ಹಿರೇಮಠ, ಸಣ್ಣ ನೀರಾವರಿ ಇಲಾಖೆ ಎಇ ಪ್ರವೀಣ್, ಸುಜಲಾನ್ ಕಂಪನಿಯ ರಾಕೇಶ್ ಇನ್ನಿತರರಿದ್ದರು. 
ಕೊಪ್ಪಳ

ಉದ್ಯಾನ ಅಭಿವೃದ್ಧಿಗೆ ಅಗತ್ಯ ಕ್ರಮ

ಶ್ರೀನಾಥ
ಕುಷ್ಟಗಿ: ನಿಡಶೇಸಿ ಕೆರೆ ಮತ್ತು ಉದ್ಯಾನವನಕ್ಕೆ ಪೂರಕ ಅಭಿವೃದ್ಧಿ ಕಾರ್ಯಗಳಿಗೆ 50 ಲಕ್ಷ ರೂ. ಕ್ರಿಯಾಯೋಜನೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಹೇಳಿದರು.
ತಾಲೂಕಿನ ನಿಡಶೇಸಿ ಕೆರೆಯಲ್ಲಿ ಸ್ವಚ್ಛತಾ ಸೇವಾ ಕಾರ್ಯ ಹಾಗೂ ಕೆರೆ ಹಾಗೂ ಉದ್ಯಾನವನ ಅಭಿವೃದ್ಧಿ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕೆರೆ ಹಾಗೂ ಉದ್ಯಾನವನ ಅಭಿವೃದ್ಧಿಗೆ ಪೂರಕವಾಗಿ ಸುಜಲಾನ್, ಜೆಎಸ್‌ಡಬ್ಲುೃ ಸೇರಿದಂತೆ ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಪ್ರತಿ ತಿಂಗಳಿಗೊಮ್ಮೆ 200-300 ಜನ ಗ್ರಾಪಂ ಕಾರ್ಮಿಕರಿಂದ ಸ್ವಚ್ಛತೆ, ಕೆರೆಯ ಪ್ರದೇಶದಲ್ಲಿ ಹೂಳು ಎತ್ತುವಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆ ಹಾಗೂ ಉದ್ಯಾನವನವನ್ನು ಸಾರ್ವಜನಿಕರ ಆಕರ್ಷಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ತಾಣವಾಗಿ ರೂಪಿಸಲು ತಾಪಂ ಬದ್ಧವಾಗಿದೆ ಎಂದರು.
ಸಿಪಿಐ ವಿಶ್ವನಾಥ ಹಿರೇಗೌಡ್ರ ಮಾತನಾಡಿ, ಈ ಉದ್ಯಾನವನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಿಡ್ಸ್ ಪಾರ್ಕ್ ಅಳವಡಿಸಲು ಸುಜಲಾನ್ ಕಂಪನಿ ಮುಂದೆ ಬಂದಿದೆ. ಇದೇ ರೀತಿ ಮುಂದೆ ಬರುವವರು ಸೇವೆ ನಿಡಲು ಇಚ್ಛಿಸಿದರೆ ಸದ್ಬಳಕೆ ಮಾಡಿಕೊಳ್ಳಲಾಗುವುದು. ಸಣ್ಣ ನೀರಾವರಿ ಇಲಾಖೆ ಎಇ ಪ್ರವೀಣ್ ಅವರು ಉದ್ಯಾನವನ ಹಾಗೂ ಕೆರೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಡಿಪಿಆರ್ ಮಾಡಿಕೊಟ್ಟರೆ ಸರ್ಕಾರದ ಮಟ್ಟದಲ್ಲಿ ಬೇಡಿಕೆ ಸಲ್ಲಿಸಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನಿಸಲು ಸಲಹೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯ ಎಇ ಪ್ರವೀಣ್ ಮಾತನಾಡಿ, ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಮಾವಿನಕೆರೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದ 36 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದೇರೀತಿ ನಿಡಶೇಸಿ ಕೆರೆಯನ್ನು ಅಭಿವೃದ್ಧಿಗೊಳಿಸಲು ಅವಕಾಶಗಳಿದ್ದು, ಈ ಕುರಿತು ಯೋಜನಾ ವರದಿ ಸಿದ್ಧಪಡಿಸಲಾಗುವುದು ಎಂದರು.
ಸುಜಲಾನ್ ಕಂಪನಿಯ ರಾಕೇಶ್, ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಶಿವಶಂಕರ ರ‌್ಯಾವಣಿಕಿ, ಕೊರಡಕೇರಾ ಗ್ರಾಪಂ ಪಿಡಿಒ ಶ್ರೀಶೈಲ್ ಪೊಲೇಶಿ, ಮುಖಂಡರಾದ ವೀರೇಶ ಬಂಗಾರಶೆಟ್ಟರ್, ಮಹಾಂತಯ್ಯ ಅರಳಲಿಮಠ ಮಾತನಾಡಿದರು. ತೋಟಗಾರಿಕೆ ಎಡಿ ಕಳಕನಗೌಡ ಪಾಟೀಲ್, ಮೀನುಗಾರಿಕೆ ಇಲಾಖೆಯ ಹುಸೇನಸಾಬ್, ಪ್ರಮುಖರಾದ ಮಹಾಂತೇಶ ಮಂಗಳೂರು, ಹ.ಯ. ಈಟಿಯವರ್, ಶರಣಪ್ಪ ಕುಡತಿನಿ, ಕೃಷ್ಣ ಕಂದಕೂರು, ಪಾಂಡುರಂಗ ಆಶ್ರಿತ್, ಮಂಜು ಕಟ್ಟಿಮನಿ, ಅಪ್ಪಣ್ಣ ನವಲಿ, ಶ್ರೀನಿವಾಸ ಶೆಟ್ಟರ್, ಶರಣಪ್ಪ ಲಿಂಗಶೆಟ್ಟರ್, ಬಾಬು ಘೋರ್ಪಡೆ, ಅಚಲಾರಾಮ್, ವೀರೇಶ ಕರಡಿ ಇನ್ನಿತರರಿದ್ದರು.