ಹನುಮಸಾಗರದ ಶ್ರೀ ಅನ್ನದಾನೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾಂತಯ್ಯ ಕೋಮಾರಿ ಮಾತನಾಡಿದರು.
ಹನುಮಸಾಗರ: ಶ್ರೀ ಅನ್ನದಾನೇಶ್ವರ ಮಠದಲ್ಲಿ ಜು.2ರಂದು ನೂತನ ಶಿಲಾ ಮಂಟಪ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾಂತಯ್ಯ ಕೋಮಾರಿ ಹೇಳಿದರು.
ಪಟ್ಟಣದ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀಮಠದಲ್ಲಿ ಅಂದು ಶ್ರೀ ಅನ್ನದಾನೇಶ್ವರ ಶಿಲಾಮಂಟಪ, ಗದ್ದುಗೆ, ಗೋಪುರ ಕಳಸಾರೋಹಣದ ಲೋಕಾರ್ಪಣೆ ಹಾಗೂ ನೂತನ ಶಾಲಾ ಕಟ್ಟಡಗಳ ಉದ್ಘಾಟನೆಗೊಳ್ಳಲಿವೆ. ಜು.1ರಂದು ದಾನಿಗಳಾದ ಸಂಗಯ್ಯ ವಸ್ತ್ರದ ಮನೆಯಿಂದ ಕಳಸ ಮತ್ತು ವಿಶ್ವನಾಥ ಕನ್ನೂರ ಮನೆಯಿಂದ ಶ್ರೀಗಳ ಮೂರ್ತಿಯನ್ನು ವಿವಿಧ ಭಜನಾ ಮಂಡಳಿಗಳೊಂದಿಗೆ ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದ ಮೂಲಕ ಶ್ರೀ ಅನ್ನದಾನೇಶ್ವರ ಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ.
ಜು.2ರಂದು ವಣಬಳ್ಳಾರಿಯ ಸಿದ್ಧಲಿಂಗಯ್ಯ ಸ್ವಾಮೀಜಿ ಅವರಿಂದ ಶಿಲಾಮಂಟಪ ಉದ್ಘಾಟನೆಗೊಳ್ಳಲಿದೆ. ಶಾಲಾ ಕಟ್ಟಡಗಳ ಉದ್ಘಾಟನೆಯನ್ನು ಹಾಲಿ, ಮಾಜಿ ಶಾಸಕರು ನೇರವೇರಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ನೇತೃತ್ವವನ್ನು ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಜಿ ವಹಿಸಲಿದ್ದಾರೆ ಎಂದರು.
ಮುಖಂಡರಾದ ವಿಶ್ವನಾಥ ಕನ್ನೂರ, ಸಂಗಯ್ಯ ವಸ್ತ್ರದ, ಅಂದಾನಯ್ಯ ಸೊಪ್ಪಿಮಠ, ಪ್ರಭುದೇವ ಬ್ಯಾಳಿ, ಶಿವಪ್ಪ ಕಂಪ್ಲಿ, ಬಸವರಾಜ ಬಾಚಲಾಪುರ, ಬಸವರಾಜ ಚಿನಿವಾಲರ, ಶ್ರೀಶೈಲ ಮೋಟಗಿ, ಪ್ರಶಾಂತ ಗಡಾದ, ಶರಣಪ್ಪ ಬಾಚಲಾಪರ, ರುದ್ರಗೌಡ ಗೌಡಪ್ಪನವರ, ಚಂದ್ರಶೇಖರ ಹಲಕೂಲಿ, ನಾಗಯ್ಯ ಹಿರೇಮಠ, ಸಿದ್ದರಾಮಯ್ಯ ಕರಕಂಡಿಮಠ, ಗಣೇಶ ಪವಾಡಶೆಟ್ಟರ, ರಮೇಶ ನಿಡಗುಂದಿ, ದುರಗೇಶ ಮಡಿವಾಳರ, ಯಮನೂರ ಮಡಿವಾಳರ, ಶ್ರೀ ಪತ್ರಿಬಸವೇಶ್ವರ, ಅನ್ನದಾನೇಶ್ವರ ಯುವಕ ಸಂಘದವರು ಉಪಸ್ಥಿತರಿದ್ದರು.