ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ
ಕೊಪ್ಪಳ: ಮಣ್ಣಿನ ಆರೋಗ್ಯ ಕಾಪಾಡುವುದು, ಭೂಮಿಯ ಫಲವತ್ತತೆ ಉಳಿಸುವುದು ಹಾಗೂ ರಾಸಾಯನಿಕ ರಸಗೊಬ್ಬರಗಳ ಕೊರತೆ ನಿವಾರಣೆಗೆ ನ್ಯಾನೋ ರಸಗೊಬ್ಬರಗಳ ಬಳಕೆ ಅತ್ಯವಶ್ಯಕವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಅತಿಯಾದ ಮತ್ತು ಅಸಮತೋಲನ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿನ ಉಪಯುಕ್ತ ಸೂಕ್ಷ$್ಮಜಿವಿಗಳು ಕಡಿಮೆಯಾಗುವುದು, ಸಾವಯವ ಕಾರ್ಬನ್ ಅಂಶ ಕುಸಿತ ಹಾಗೂ ಫಲವತ್ತತೆ ಹದಗೆಡುವ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದ ಉತ್ಪಾದನಾ ವೆಚ್ಚ ಏರಿಕೆಯಾಗುವ ಜತೆಗೆ ಬೆಳೆ ಉತ್ಪಾದಕತೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.
ಮಧ್ಯಪ್ರಾಚ್ಯ ಯುದ್ಧ ಪರಿಸ್ಥಿತಿಯಿಂದ ರಾಸಾಯನಿಕ ಗೊಬ್ಬರಗಳ ಲಭ್ಯತೆಯಲ್ಲಿ ತಾತ್ಕಾಲಿಕ ಸಮಸ್ಯೆಗಳು ಎದುರಾಗುತ್ತಿದ್ದು, ಇಫ್ಕೋ ಅಭಿವೃದ್ಧಿಪಡಿಸಿರುವ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಗೊಬ್ಬರಗಳು ಪರಿಣಾಮಕಾರಿ ಪರ್ಯಾಯವಾಗಿವೆ. ಇವು ಪೋಷಕಾಂಶ ಬಳಕೆ ದಕ್ಷತೆಯನ್ನು ಹೆಚ್ಚಿಸಿ, ಬೆಳೆಗಳ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದರ ಜತೆಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತವೆ.
ರೈತರು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ತಜ್ಞರ ಮಾರ್ಗದರ್ಶನದಲ್ಲಿ ನ್ಯಾನೋ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ವಿವಿಧ ತರಬೇತಿ, ಕ್ಷೇತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.