ಗಂಗಾವತಿ ಸಿಬಿಎಸ್ ಗಂಜ್ ಎಪಿಎಂಸಿ ಮೊದಲ ಗೇಟ್ ಬಳಿ ಪರವಾನಗಿಯಿಲ್ಲದೇ ನಿರ್ಮಿಸಿದ್ದ ಶ್ರೀ ರೇಣುಕಾಚಾರ್ಯರ ವೃತ್ತದ ನಾಮಲಕ ತೆರವಿಗೆ ನಗರಸಭೆ ಸಿಬ್ಬಂದಿ ಮುಂದಾಗಿದ್ದರಿಂದ ಜಂಗಮ ಸಮಾಜದವರು ಅಡ್ಡಿಪಡಿಸಿದ ಕಾರಣ ಗದ್ದಲ ನಡೆಯಿತು. ಆರೋಗ್ಯ ನಿರೀಕ್ಷಕ ಎ.ನಾಗರಾಜ, ಸಹಾಯಕ ಮೋಯಿನ್ ಪಟೇಲ್, ಜಂಗಮ ಸಮಾಜದ ಶಂಕ್ರಯಸ್ವಾಮಿ, ಆದೆಯ್ಯ ಸ್ವಾಮಿ ಇತರರಿದ್ದರು.
- ಜಂಗಮ ಸಮಾಜದಿಂದ ಆಕ್ಷೇಪ 29ರವರೆಗೆ ಗಡುವು
ಗಂಗಾವತಿ: ನಗರದ ಸಿಬಿಎಸ್ ಗಂಜ್ ಎಪಿಎಂಸಿ ಮೊದಲ ಗೇಟ್ ಬಳಿ ಪರವಾನಗಿಯಿಲ್ಲದೇ ನಿರ್ಮಿಸಿದ್ದ ಶ್ರೀ ರೇಣುಕಾಚಾರ್ಯರ ವೃತ್ತದ ನಾಮಲಕ ತೆರವಿಗೆ ನಗರಸಭೆ ಸೋಮವಾರ ಮುಂದಾಗಿದ್ದರಿಂದ ಜಂಗಮ ಸಮಾಜದವರು ಆಕ್ಷೇಪಿಸಿದ್ದು, ಕೆಲಕಾಲ ಗದ್ದಲ ನಡೆಯಿತು.
ಮೂರು ದಿನಗಳ ಹಿಂದೆ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶ್ರೀರೇಣುಕಾಚಾರ್ಯರ ವೃತ್ತ ನಿರ್ಮಿಸಿದ್ದು, ಸಮಾಜದ ಪ್ರಮುಖರು ಮತ್ತು ಮಾಜಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಗಿತ್ತು. ನಗರಸಭೆಯಿಂದ ಪರವಾನಗಿ ಪಡೆಯದೇ ನಾಮಲಕ ಹಾಕಿದ್ದರಿಂದ ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಒ ನೇತೃತ್ವದ ಸಿಬ್ಬಂದಿ ತೆರವಿಗೆ ಮುಂದಾದರು.
ಮಾಹಿತಿ ಅರಿತ ಸಮಾಜದ ಮುಖಂಡರು ಮತ್ತು ಯುವಕರು ಸಿಬ್ಬಂದಿಯನ್ನು ತಡೆದರಲ್ಲದೇ, ನಾಮಲಕ ತೆರವಿಗೆ ಅವಕಾಶ ನೀಡಲಿಲ್ಲ. ಇದರಿಂದ ಸಿಬ್ಬಂದಿ ಮತ್ತು ಸಮಾಜದವರ ನಡುವೆ ವಾಗ್ವಾದ ನಡೆಯಿತು. ತೆರವಿಗೆ ಮಾ.29ರವರಿಗೆ ಅವಕಾಶ ನೀಡುವಂತೆ ಸಿಬ್ಬಂದಿಯನ್ನು ಕೇಳಿಕೊಂಡಿದ್ದರಿಂದ ತಿಳಿಗೊಂಡಿತ್ತು. ಮುಖಂಡರಾದ ಎಸ್.ಬಿ.ಹಿರೇಮಠ, ಶಂಕ್ರಯ್ಯಸ್ವಾಮಿ, ಆದೆಯ್ಯಸ್ವಾಮಿ ಇತರರಿದ್ದರು.
ಸಮಾಜದ ಹಿರಿಯ ಮುಖಂಡ ಮತ್ತು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ನೇತೃತ್ವದ ಮುಖಂಡರು ನಗರಸಭೆ ಕಚೇರಿಗೆ ಆಗಮಿಸಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿಯರೊಂದಿಗೆ ಚರ್ಚಿಸಿದರು. ಕಾನೂನು ಬದ್ಧವಾಗಿ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕಾಲವಕಾಶ ನೀಡುವಂತೆ ಸಮಾಜದವರು ಮನವಿ ಮಾಡಿದ್ದರಿಂದ ತೆರವು ಕೈಬಿಡಲಾಯಿತು. ಹಾಲಿ ಜನಪ್ರತಿನಿಧಿಗಳನ್ನು ಬಿಟ್ಟು, ಮಾಜಿ ಜನಪ್ರತಿನಿಧಿಗಳೊಂದಿಗೆ ವೃತ್ತ ಅನಾವರಣಗೊಳಿಸಿದ್ದು ಗೊಂದಲಕ್ಕೆ ಕಾರಣ ಎನ್ನಲಾಗುತ್ತಿದೆ.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ನಗರಸಭೆ ಗಮನಕ್ಕೆ ತರದೇ ಮತ್ತು ಪೌರಾಡಳಿತ ಕಾಯ್ದೆ ನಿಯಮಾವಳಿಯಂತೆ ವೃತ್ತಕ್ಕೆ ಪರವಾನಗಿ ಪಡೆದಿಲ್ಲ. ಅದರಲ್ಲೂ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ವೃತ್ತ ನಿರ್ಮಾಣಕ್ಕೆ ಅವಕಾಶವಿಲ್ಲ. ಸ್ವಯಂ ತೆರವಿಗೆ ಮಾ.29ರವರೆಗೆ ಗಡುವು ನೀಡಲಾಗಿದೆ ಎಂದರು.
ವೃತ್ತ ನಿರ್ಮಾಣಕ್ಕೆ ಮುನ್ನವೇ ನಗರಸಭೆಗೆ ಲಿಖಿತವಾಗಿ ಮನವಿ ಮಾಡಿದ್ದು, ಕಾಯ್ದೆಯಂತೆ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಏಕಾಏಕಿ ತೆರವುಗೊಳಿಸುವುದರಿಂದ ಸಮಾಜದ ಭಾವನೆಗಳಿಗೆ ಧಕ್ಕೆಯಾಗಲಿದೆ.