ಕುಕನೂರು ತಾಲೂಕಿನ ಹರಿಶಂಕರ ಬಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ರಾಜಶೇಖರ ಮಳಿಮಠ ಇದ್ದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ | ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಕುಕನೂರು: ಪ್ರಧಾನಿ ನರೇಂದ್ರ ಮೋದಿ ಅವರ 13 ವರ್ಷದ ಆಡಳಿತ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಹೊಂದಾಣಿಕೆ ಮಾಡಿದರೆ 2.5 ವರ್ಷದಲ್ಲಿ ಸಿದ್ದರಾಮಯ್ಯ ಅವರಿಂದ ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಹರಿಶಂಕರ ಬಂಡಿ, ಚನ್ನಪ್ಪನಹಳ್ಳಿ ಹಾಗೂ ಇತರ ಗ್ರಾಮದಲ್ಲಿ ಶನಿವಾರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು. ವಿರೋಧ ಪಕ್ಷದವರು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡುವುದಿಲ್ಲ. ಹಿಂದು, ಮುಸ್ಲಿಂ ಭಾಷಣದಿಂದ ಏನೂ ಪ್ರಯೋಜನ ಇಲ್ಲ. ಬಡತನದಲ್ಲಿ ಬೆಳೆದ ಸಿದ್ದರಾಮಯ್ಯ ಅವರು ಬಡಜನರ ಬಗ್ಗೆ ಕಳಕಳಿ ಹೊಂದಿದ್ದಾರೆ.
1985ರ ಕಾಲಘಟ್ಟದಲ್ಲಿ ರಾಜಕಾರಣಕ್ಕೆ ಬಂದವರಿಂದ ಜನಪರ ಕಾರ್ಯವಾಗುತ್ತವೆ. ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ರಾಜಕಾರಣಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಬೇಕು. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ನೀರಾವರಿ ಯೋಜನೆ ಬಗ್ಗೆ ಬೆಳಗಾವಿ ಕಲಾಪದಲ್ಲಿ ಮಾತನಾಡಿದ್ದೇನೆ. ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಯುಕೆಪಿ ಯೋಜನೆ ಹಾಗೇ ನಿಂತಿದ್ದು, ನೀರಾವರಿ ಭಾಷಣ ಯಾರಾದರೂ ಮಾತನಾಡಿದರೆ ಅವರ ಸ್ವಂತ ಊರಿಗೆ ನೀರಾವರಿ ಮಾಡಿಕೊಂಡಿದ್ದೀರಾ ಎಂದು ಕೇಳಿ ಎಂದು ಟೀಕಿಸಿದರು.
ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ರಾಜಶೇಖರ ಮಳಿಮಠ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಪ್ರಮುಖರಾದ ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಅಶೋಕ ತೋಟದ, ಸಿದ್ದಯ್ಯ ಕಳ್ಳಿಮಠ, ಸಿರಾಜ್ ಕರಮುಡಿ, ಸಂಗಮೇಶ ಗುತ್ತಿ, ಹನುಮೇಶ ಕಡೇಮನಿ, ಬಸಯ್ಯ ಕರಡಿ, ನಾಗಯ್ಯ ಇದ್ದರು.
ಕನ್ನಡ ಭಾಷೆಗೆ ಕೇರಳ ಅವಕಾಶ ನೀಡಲಿ
ಕುಕನೂರು: ಕನ್ನಡ ಭಾಷೆಗೆ ಕೇರಳ ಅವಕಾಶ ನೀಡಬೇಕು. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಬಳಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾಗಿತ್ತು. ಮಾಹಾಜನ ವರದಿಯಲ್ಲಿ ಕಾಸರಗೋಡು ಆ ಕಡೆ ಕೊಟ್ಟಿದ್ದಾರೆ. ಆದರೆ ಭಾಷೆಯ ಅಭಿಮಾನ ದುರಾಭಿಮಾನವಾಗಬಾರದು. ಕನ್ನಡ ಭಾಷೆ ಮಾತನಾಡುವವರಿಗೆ ಅನಕೂಲ ಮಾಡಿಕೊಡಬೇಕು. ಕರ್ನಾಟಕದಲ್ಲಿ ಬೇರೆ ವಿಷಯ ಮಾತಾಡೋಕೆ ಅವಕಾಶ ಕೊಟ್ಟಿದ್ದೇವೆ.
ಸಿಎಂ ಸಿದ್ದರಾಮಯ್ಯ ಮಾತಾಡಿರೋದನ್ನು ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ಕನ್ನಡ ಭಾಷೆಗೆ ಕೇರಳ ಅವಕಾಶ ಮಾಡಿಕೊಡಬೇಕು. ಮತ ಬ್ಯಾಂಕ್‌ಗಾಗಿ ಮಲಯಾಳಿ ಭಾಷೆ ಅನುಕಂಪ ತೋರಿಸೋದು ಸರಿಯಲ್ಲ. ಕೇರಳದಲ್ಲೂ ಅನಧಿಕೃತ ಮನೆಗಳನ್ನ ಒಡೆದು ಹಾಕಿದ್ದಾರೆ. ಅಲ್ಲಿ ನಾವೇನು ಕೈ ಹಾಕಿದ್ದೇವಾ ಎಂದು ಪ್ರಶ್ನಿಸಿದರು. ಕೇರಳ ಸಿಎಂ ಪಿಣರಾಯಿ ಅವರು ಅನುಭವಿ ರಾಜಕಾರಣಿ. ಅವರು ಹೀಗೆ ಮಾಡೋದು ಸರಿ ಅಲ್ಲ ಎಂದರು.
ಕೂಡಲೇ ನನ್ನನ್ನು ಪಿಎಂ ಮಾಡಿ!
ತಾಲೂಕಿನ ಬಳಗೇರಿ ಗ್ರಾಮದ ಜನಸಂಪರ್ಕ ಸಭೆಯಲ್ಲಿ ರೈತರು ಬೆಳಗ್ಗೆ 4 ಗಂಟೆಗೆ ವಿದ್ಯುತ್ ನೀಡುವಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ, ಕೂಡಲೇ ನನ್ನ ಪಿಎಂ, ಸಿಎಂ ಮಾಡಿ ವಿದ್ಯುತ್ ಕೊಡುತ್ತೇನೆ. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಿರಿ ಎಂದು ಉತ್ತರಿಸಿದ್ದಾರೆ. ಇನ್ನೊಂದು ಎರಡು ವರ್ಷ ತಡೀರಿ ವಿದ್ಯುತ್ ಫುಲ್ ಇರುತ್ತದೆ ಎಂದರು.