ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ದಢೇಸುಗುರ, ಗೀತಾ ಮುತ್ತಾಳ ಇತರರಿದ್ದರು.
- ಎಂಎಲ್ಸಿ ಹೇಮಲತಾ ನಾಯಕ ಆಕ್ರೋಶ
ಕೊಪ್ಪಳ : ಮಹಿಳೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯಂತಹ ಭೀಕರ ಘಟನೆಯನ್ನು ಸಣ್ಣ ವಿಷಯ ಎಂದು ಕರೆದಿರುವ ಸಂಸದ ರಾಜಶೇಖರ ಹಿಟ್ನಾಳ ಅವರ ಬೇಜವಾಬ್ದಾರಿ ಹೇಳಿಕೆಯು ಜಿಲ್ಲೆಯ ಪ್ರತಿಯೊಬ್ಬರೂ ತಲೆ ತಗ್ಗಿಸುವಂತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಸಂಸದರು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಂತಹ ಸ್ಥಾನದಲ್ಲಿ ಕುಳಿತು ಅತ್ಯಾಚಾರದಂತಹ ಘಟನೆಯನ್ನು ಸಣ್ಣದು ಎಂದು ರ್ನಿಲಕ್ಷಿಸುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಪ್ರವಾಸೋದ್ಯಮ ಕುಂಠಿತವಾಯಿತು ಎಂದು ಕಳಕಳಿ ವ್ಯಕ್ತಪಡಿಸುವ ಅವರು, ಒಬ್ಬ ಹೆಣ್ಣು ಮಗಳ ಜೀವ ಮತ್ತು ಗೌರವಕ್ಕಿಂತ ಪ್ರವಾಸೋದ್ಯಮವೇ ದೊಡ್ಡದು ಎಂದು ಭಾವಿಸಿದ್ದಾರೆ ಎಂದು ಟೀಕಿಸಿದರು.
ಆನೆಗೊಂದಿ ಮತ್ತು ಅಂಜನಾದ್ರಿ ಭಾಗದ ರೆಸಾರ್ಟ್ಗಳ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವ ಅವರು, ಆ ಭಾಗವು ಸಂಪೂರ್ಣವಾಗಿ ಗಾಂಜಾ ಮತ್ತು ಅಫೀಮು ಮಾರಾಟದ ತಾಣವಾಗಿ ಮಾರ್ಪಟ್ಟಿದ್ದು ತಿಳಿಯುತ್ತಲ್ಲ. ಈ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ ? ಜಿಲ್ಲೆಯಲ್ಲಿ ಇಬ್ಬರು ಸಹೋದರರು ಅಧಿಕಾರದಲ್ಲಿದ್ದಾರೆ. ಅವರು ಮೊದಲು ಅಲ್ಲಿನ ಅಕ್ರಮ ಕೃತ್ಯಗಳನ್ನು ನಿಲ್ಲಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಸಲಹೆ ನೀಡಿದರು.
ಅಂಜನಾದ್ರಿ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಮೀಸಲಿಟ್ಟು ರೂಪರೇಷ ಸಿದ್ಧಪಡಿಸಿದ್ದು ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ, ಸರಿಯಾದ ಯೋಜನೆ ರೂಪಿಸಿ ಅಭಿವೃದ್ಧಿ ಮಾಡಿ. ಅದನ್ನು ಬಿಟ್ಟು ನಡೆದ ದುರ್ಘಟನೆಯನ್ನು ಸಣ್ಣ ವಿಷಯ ಎನ್ನುವುದು ಮತ್ತು ಬಿಜೆಪಿಯವರ ಮೇಲೆ ರಾಜಕೀಯದ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ದಢೇಸುಗುರ, ಗೀತಾ ಮುತ್ತಾಳ ಇತರರಿದ್ದರು.
ಆತಿಥ್ಯಕ್ಕಿಂತ ಸುರಕ್ಷತೆ ಮುಖ್ಯ.ಪ್ರವಾಸೋದ್ಯಮ ಬೆಳೆಯಬೇಕಾದರೆ ಮೊದಲು ಪ್ರವಾಸಿಗರಿಗೆ ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಬೇಕು. ಇಡಿ ರಾಜ್ಯವೇ ತಲೆತಗ್ಗಿಸುವಂತಹ ಘಟನೆ ನಡೆದಾಗ ಅದು ಸಣ್ಣ ವಿಷಯ ಎನ್ನುವುದು ಸಂಸದರು ಮಹಿಳೆಯರಿಗೆ ನೀವು ನೀಡುವ ಅಗೌರವಾಗಿದೆ. ಈ ಹೇಳಿಕೆ ಬೆಂಗಳೂರಿನವರೆಗೂ ಪ್ರಚಾರವಾಗಿ ಜಿಲ್ಲೆಯ ಗೌರವ ಹರಾಜಾಗಿದೆ.