ನೈತಿಕ ಪೊಲೀಸ್ ಗಿರಿ, ಗಾಂಜಾ ದಂಧೆ ನಿಯಂತ್ರಣಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ಎ. ಗಫಾರ್, ಬಸವರಾಜ ಶೀಲವಂತರ್, ಚನ್ನಬಸಪ್ಪ ಅಪ್ಪಣ್ಣವರ, ಶಿವಪ್ಪ ಹಡಪದ ಇದ್ದರು.
- ಡಿಸಿ ಡಾ. ಸುರೇಶ ಇಟ್ನಾಳಗೆ ಮನವಿ
ಕೊಪ್ಪಳ : ರಾಜ್ಯದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ, ಗಾಂಜಾ ದಂಧೆ, ನಕಲಿ ಗೋರಕ್ಷಕರ ಹಾವಳಿ ಹಾಗೂ ರೌಡಿಸಂನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಸಮಾಜಘಾತುಕ ಶಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ, ಗೋ ಸಾಗಾಟದ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು, ಗುಂಪು ಹಲ್ಲೆ ಹಾಗೂ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿವೆ. ರಾಜ್ಯಾದ್ಯಂತ ಗಾಂಜಾ ಮಾರಾಟ ಮತ್ತು ಸೇವನೆ ಅವ್ಯಾಹತವಾಗಿ ನಡೆಯುತ್ತಿದ್ದು, ಯುವಜನತೆ ದಾರಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲೂ ನಕಲಿ ಗೋರಕ್ಷಕರ ಹೆಸರಿನಲ್ಲಿ ಕೆಲ ದುಷ್ಕರ್ಮಿಗಳು ರೈತರಿಗೆ ಕಿರುಕುಳ ನೀಡಿ, ಜಾನುವಾರು ಸಾಗಾಟ ಹಾಗೂ ಮಾರಾಟಕ್ಕೆ ಅಡ್ಡಿಪಡಿಸುತ್ತಿರುವುದಾಗಿ ಆರೋಪಿಸಲಾಗಿದೆ. ಇಂತಹ ಕೃತ್ಯಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ರೌಡಿಶೀಟರ್ಗಳ ವಿರುದ್ಧ ಕಠಿಣ ಕ್ರಮ, ವಿಶೇಷ ತನಿಖಾ ತಂಡ ರಚನೆ, ನಕಲಿ ಗೋರಕ್ಷಕರ ಬಂಧನ, ಗಾಂಜಾ ದಂಧೆಕೋರರಿಗೆ ಕಠಿಣ ಶಿಕ್ಷೆ ಹಾಗೂ ದುಷ್ಕರ್ಮಿಗಳೊಂದಿಗೆ ಶಾಮೀಲಾಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ್, ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಶಿವಪ್ಪ ಹಡಪದ ಇದ್ದರು.