ಕೋತಿ ದಾಳಿಯಿಂದ ಅಯ್ಯಪ್ಪ ಮಾಲಾಧಾರಿ ಗಾಯಗೊಂಡಿರುವುದು. 
ಕೊಪ್ಪಳ

ಅಯ್ಯಪ್ಪ ಮಾಲಾಧಾರಿಗಳಿಗೆ ಕೋತಿ ಕಾಟ

ಪ್ರಮುಖ ಮುಖ್ಯಾಂಶಗಳು

  • ಅಯ್ಯಪ್ಪ ಮಾಲಾಧಾರಿ ಮೇಲೆ ಕೋತಿ ದಾಳಿ
  • ಕೈ ಮತ್ತು ಸೊಂಟದ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದ ಮಂಗ
  • ಮರಗಳಲ್ಲಿ ಬೀಡು ಬಿಟ್ಟಿರುವ ಕೋತಿಗಳ ಹಿಂಡು
ಮುನಿರಾಬಾದ್: ಸಮೀಪದ ಹುಲಿಗಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿ ಮೇಲೆ ಕೋತಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ಕೋತಿವೊಂದು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರಿಗೆ ಕಚ್ಚಿ ಗಾಯಗೊಳಿಸಿತ್ತು. ಅದನ್ನು ಅರಣ್ಯ ಇಲಾಖೆ ಮತ್ತು ಗ್ರಾಪಂ ಸಿಬ್ಬಂದಿ ಸೆರೆ ಹಿಡಿದಿದ್ದರು. ಇದೀಗ ಮತ್ತೊಂದು ಕೋತಿ ಪ್ರತ್ಯಕ್ಷವಾಗಿದ್ದು, ಸೂರ್ಯನಾರಾಯಣ ದೇವಸ್ಥಾನ ಆವರಣದ ಆಂಜನೇಯ ದೇಗುಲದಲ್ಲಿ ತಂಗಿರುವ ಅಯ್ಯಪ್ಪ ಮತ್ತು ಹನುಮಮಾಲಾ ಧಾರಿಗಳ ಮೇಲೆ ದಾಳಿ ನೆಡಸುತ್ತಿದೆ.
ಅಲ್ಲಿನ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಕೈ ಮತ್ತು ಸೊಂಟದ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಇವರಿಗೆ ಮುನಿರಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕೋತಿ ಕಾಟಕ್ಕೆ ಮಾಲಾಧಾರಿಗಳು ತಾವು ತಂಗಿರುವ ದೇಗುಲದ ಕಿಟಕಿ-ಬಾಗಿಲುಗಳನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ದೇವಸ್ಥಾನ ಗಿಡ ಮರಗಳಲ್ಲಿ ಬೀಡು ಬಿಟ್ಟಿರುವ ಕೋತಿಗಳ ಹಿಂಡಿನಲ್ಲಿ ಒಂದರ ಉಪಟಳ ಕಳೆದ ಎರಡು ವಾರದಿಂದ ಹೆಚ್ಚಾಗಿದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಮಾಲಾಧಾರಿಗಳಲ್ಲಿ ಆತಂಕ ಮನೆ ಮಾಡಿದ್ದು, ಕೋತಿಗೆ ಹುಚ್ಚು ಹಿಡಿದಿದ್ದು, ಅದನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.