ಕನಕಗಿರಿಯ ತಾಪಂನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪ್ರಥಮ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಡಿಪಿಒ ವಿರೂಪಾಕ್ಷಿ ಮಾತನಾಡಿದರು. ತಾಪಂ ಇಒ ಕೆ.ರಾಜಶೇಖರ್, ಗ್ಯಾರಂಟಿ ಸಮಿತಿ ಸದಸ್ಯರಾದ ಕನಕಪ್ಪ ತಳವಾರ, ಯಮನೂರಪ್ಪ, ಜಗದೀಶ್ ರಾಠೋಡ್ ಇತರರಿದ್ದರು.
- ಸಿಡಿಪಿಒ ವಿರೂಪಾಕ್ಷಿ ನಿರ್ದೇಶನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ
ಕನಕಗಿರಿ: ಮೃತಪಟ್ಟ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿಯೋಜನೆಯ ಹಣ ಜಮೆಯಾಗುವುದನ್ನು ತಡೆಯಲು ಮರಣ ಪ್ರಮಾಣ ಪತ್ರ ಹಾಗೂ ಪಡಿತರ ಚೀಟಿಗಳನ್ನು ಪಡೆಯುವುದು ಅವಶ್ಯವಾಗಿದೆ ಎಂದು ಸಿಡಿಪಿಒ ವಿರೂಪಾಕ್ಷಿ ಹೇಳಿದರು.
ಪಟ್ಟಣದ ತಾ.ಪಂ.ಕಾರ್ಯಾಲಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಜರತ್ ಹುಸೇನ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ವರದಿ ನೀಡಿ ಮಾತನಾಡಿದರು.
ಈಗಾಗಲೇ ಜಿಲ್ಲಾದ್ಯಂತ ಮರಣ ಹೊಂದಿದ ಆರು ಸಾವಿರಕ್ಕೂ ಅಧಿಕ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಯೋಜನೆ ದುರುಪಯೋಗವಾಗುವುದನ್ನು ತಪ್ಪಿಸಲು ಮರಣ ಪ್ರಮಾಣ ಪತ್ರ, ರೇಷನ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಒದಗಿಸಲು ಫಲಾನುಭವಿಗಳ ಸಂಬಂಧಿಕರಿಗೆ ಮನವೊಲಿಸಿ, ಅವರ ಕುಟುಂಬದ ಹಿರಿಯರಿಗೆ ಯೋಜನೆಯ ಲಾಭ ಒದಗಿಸಲು ಮುಂದಾಗಬೇಕು. ತಾಂತ್ರಿಕ ತೊಂದರೆಗಳಿದ್ದ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಹಣ ತಲುಪುತ್ತಿಲ್ಲ ಎನ್ನುವುದು ಬಿಟ್ಟರೆ ಉಳಿದ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದೆ. ಅಲ್ಲದೆ, ಎರಡು ಕಡೆಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆ ಇರುವವರನ್ನು ಪತ್ತೆ ಹಚ್ಚಿ ಒಂದು ಖಾತೆಗೆ ಹಣ ಜಮೆ ಮಾಡಲು ಕ್ರಮ ವಹಿಸಬೇಕಿದೆ ಎಂದರು.
ನಾನಾ ಸೌಲಭ್ಯಗಳಿಗೆ ಒತ್ತಾಯ: ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಹಾಕಲು ಹೋದಾಗ ಲೊಕೇಷನ್ ನಾಟ್ ಫೌಂಡ್ ಎಂದು ಬರುತ್ತಿದ್ದು, ಸಮಸ್ಯೆಯನ್ನು ಬಗೆಹರಿಸಲು ಗ್ಯಾರಂಟಿ ಸಮಿತಿ ಸದಸ್ಯರು ತಿಳಿಸಿದರು. ಮಳೆಗಾಲ ಆರಂಭವಾಗಿರುವುದರಿಂದ ವಿದ್ಯುತ್ ಕಡಿತಗೊಳಿಸದಿರಲು ಕ್ರಮವಹಿಸಬೇಕು ಎಂದು ಜೆಸ್ಕಾಂ ಶಾಖಾಧಿಕಾರಿಗೆ ಸೂಚಿಸಿದರು. ನಂತರ ಶಕ್ತಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಬಸ್ ನಿಲ್ದಾಣದ ಸ್ವಚ್ಛತೆಯನ್ನು ಕಾಪಾಡಲು, ಕೊಪ್ಪಳ-ಕನಕಗಿರಿ ತಡೆ ರಹಿತ ಬಸ್ ಸಂಚಾರ ಆರಂಭಕ್ಕೆ ಒತ್ತಾಯಿಸಿದರು.
ತಾಪಂ ಇಒ ಕೆ.ರಾಜಶೇಖರ್, ಗ್ಯಾರಂಟಿ ಸಮಿತಿ ಸದಸ್ಯರಾದ ಕನಕಪ್ಪ ತಳವಾರ, ಯಮನೂರಪ್ಪ, ಜಗದೀಶ್ ರಾಠೋಡ್, ನೀಲಕಂಠ ಬಡಿಗೇರ್, ಚನ್ನಬಸವನಗೌಡ, ಕರಿಯಪ್ಪ ನಾಯಕ, ಜಗದೀಶ್ ಸುಳೇಕಲ್, ಹನುಮಮ್ಮ, ಗ್ಯಾನಪ್ಪ, ಭೀಮೇಶ್, ವೀರೇಶ್, ಕೆಕೆಆರ್‌ಟಿಸಿ ಇಲಾಖೆಯ ಅಧಿಕಾರಿ ಮಹಾಂತೇಶ್ ಸಜ್ಜನ್, ಹನುಮೇಶ್ ಇತರರಿದ್ದರು.
"
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಫಲಾನುಭವಿಗಳಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ಮಾಡಲಿ.
— ಹಜರತ್ ಹುಸೇನ್ ತಾಲೂಕು ಅಧ್ಯಕ್ಷ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಕನಕಗಿರಿ