- ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ
ಕೊಪ್ಪಳ : ನರೇಂದ್ರ ಮೋದಿ ಚುನಾಯಿತ ಪ್ರಧಾನಿಗಳ ಪೈಕಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ್ದು ರಾಷ್ಟ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
60 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ ಸಾಧನೆಗಿಂತ ಕೇವಲ 12 ವರ್ಷದಲ್ಲಿ ಮೋದಿ ಸಾಕಷ್ಟು ಸಾಧನೆ ಮೆರೆದಿದ್ದಾರೆ. ಶಿಕ್ಷಣ, ಮೂಲ ಸೌಕರ್ಯ, ತಂತ್ರಜ್ಞಾನ ಸೇರಿ ಎಲ್ಲ ವಿಭಾಗಗಳಲ್ಲಿ ಅಭಿವೃದ್ಧಿ ಆಗಿದೆ. 23 ಐಐಟಿ, 21 ಐಐಸಿ, 25 ಐಐಐಟಿ, 53 ಸೆಂಟ್ರಲ್ ವಿವಿ ಮಾಡಲಾಗಿದೆ. 23 ಏಮ್ಸ್, 1.18ಲಕ್ಷ ಮೆಡಿಕಲ್ ಸೀಟ್, 74ಸಾವಿರ ಪಿಜಿ ಸೀಟ್ ನೀಡಲಾಗಿದೆ. 1.5ಲಕ್ಷ ಕಿ.ಮೀ. ಎನ್.ಎಚ್. 1 ಸಾವಿರ ಕಿ.ಮೀ. ಮೆಟ್ರೊ, 160 ವಿಮಾನ ನಿಲ್ದಾಣ, ಜನ್ಧನ್ ಖಾತೆ ತೆರೆದು ಬಡವರಿಗೆ ಅನುಕೂಲ ಮಾಡಲಾಗಿದೆ. ಸಾಧನೆ ಪಟ್ಟಿ ದೊಡ್ಡದಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಯುದ್ಧ ನಿಲ್ಲಿಸಲಾಗಿದೆ. ಇದುವರೆಗೂ ಭಾರತದ ನೌಕೆಗಳಿಗೆ ತೊಂದರೆ ಆಗಿಲ್ಲ. ಮೊನ್ನೆ ಒಂದು ಪಣಿ ದಾಳಿಯಾಗಿದ್ದು ಮೂವರು ಪ್ರಾಣ ತೆತ್ತಿದ್ದಾರೆ. ದಾಳಿ ಆಕಸ್ಮಿಕವಾ, ಉದ್ದೇಶಪೂರ್ವಕವಾ ಎಂಬುದನ್ನು ಅವಲೋಕಿಸಬೇಕು. ಏಕಾಏಕಿ ಮಾತನಾಡಲು ಆಗದು. ಈ ಬಗ್ಗೆ ರಾಹುಲ್ ಗಾಂಧಿಗೆ ಸಾಮಾನ್ಯ ಜ್ಞಾನ ಇಲ್ಲ. ಸುಖಾಸುಮ್ಮನೇ ಮೋದಿ ವಿರುದ್ಧ ಆರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆಂದು ಕುಟುಕಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಜಿಲ್ಲಾ ಪ್ರ.ಕಾ.ಸುನಿಲ್ ಹೆಸರೂರ ಇದ್ದರು.