ವಿಬಿ ಜಿ ರಾಮ್ ಜಿ ಯೋಜನೆ ರದ್ದುಗೊಳಿಸಿ ನರೇಗಾ ಮುಂದುವರಿಸಲು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಚಿಕ್ಕಡಂಕನಕಲ್-ಹಿರೇಡಂಕನಕಲ್ ಗ್ರಾಮ ಘಟಕದಿಂದ ಚಿಕ್ಕಡಂಕನಕಲ್ ಗ್ರಾಪಂ ಪಿಡಿಒ ಹನುಮಂತಪ್ಪಗೆ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಯಮನಪ್ಪ ಕುಂಬಾರ, ರಾಘವೇಂದ್ರ ಪಂಪಾಪತಿ ಅಲಾಯಿಕುಣಿ, ಮಂಜುನಾಥ ಪಗಡದಿನ್ನಿ ಇತರರಿದ್ದರು.
- ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಆಗ್ರಹ
- ಕನಕಗಿರಿ ಪಿಡಿಒ ಹಾಗೂ ತಾಪಂ ಇಒಗೆ ಮನವಿ
ಕನಕಗಿರಿ: ವಿಬಿ ಜಿ ರಾಮ್ ಜಿ ಯೋಜನೆಯನ್ನು ರದ್ದುಗೊಳಿಸಿ ನರೇಗಾ ಯೋಜನೆಯನ್ನು ಮುಂದುವರಿಸಿ ಕೂಲಿಕಾರರಿಗೆ ಕೆಲಸ ಕೊಡಲು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಚಿಕ್ಕಡಂಕನಕಲ್-ಹಿರೇಡಂಕನಕಲ್ ಗ್ರಾಮ ಘಟಕದಿಂದ ಗ್ರಾಪಂ ಪಿಡಿಒ ಹನುಮಂತಪ್ಪ ಹಾಗೂ ತಾಪಂ ಇಒ ರಾಜಶೇಖರಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಘಟಕದ ಅಧ್ಯಕ್ಷ ರಮೇಶ ಮಾತನಾಡಿ, 2025ರ ಡಿ.21ರಂದು ಕೇಂದ್ರ ಸರ್ಕಾರ ನರೇಗಾ ರದ್ದುಗೊಳಿಸಿ ಕಾರ್ಪೊರೇಟ್ ಪರ ನೀತಿಗಳಿಗೆ ಜೈಕಾರ ಹಾಕುವ ಮೂಲಕ ವಿಬಿ ಜಿ ರಾಮ್ ಜಿ ಸಂಸತ್‌ನಲ್ಲಿ ಜಾರಿಗೊಳಿಸಿದೆ. ಜು.1ರಿಂದ ಅಧಿಕೃತವಾಗಿ ಕೆಲಸ ಕೊಡುವುದಾಗಿ ಹೇಳಿ ಹೊಸ ಯೋಜನೆ ಅನುಷ್ಠಾನ ಮಾಡಿರುವುದು ಖಂಡನೀಯ.
ಇದನ್ನು ಕೈಬಿಟ್ಟು ಇಂದಿನಿಂದಲೇ ಕೂಲಿಕಾರರಿಗೆ ಕೆಲಸ ಕೊಟ್ಟು, ರಾಜ್ಯ ಸರ್ಕಾರದ ಕನಿಷ್ಠ ಕೂಲಿ ಅನ್ವಯಿಸಿ ಕೂಲಿ ಹಣ ನೀಡಬೇಕು ಇಲ್ಲವೇ 700ರೂ. ಕೂಲಿಯನ್ನು ನಿಗದಿಸಬೇಕು. ಎನ್‌ಎಂಎಂಎಸ್ ಮತ್ತು ಇ ಕೆವೈಸಿಯಂಥ ಇತರೇ ಅವೈಜ್ಞಾನಿಕ ತಂತಜ್ಞಾನ ಅಳವಡಿಕೆ ಕೈಬಿಟ್ಟು, ಸರಳ ರೀತಿಯಲ್ಲಿ ಕೂಲಿಕಾರರ ಹಾಜರಾತಿ ನಿರ್ವಹಿಸಬೇಕು. ಕೇಂದ್ರ ಸರ್ಕಾರ ಶೇ.60 ಅನುದಾನ ಕೊಡುತ್ತೇನೆಂದು ಹೇಳಿರುವಂತೆ 75ದಿನ ಕೆಲಸವನ್ನು ರಾಜ್ಯ ಸರ್ಕಾರವನ್ನು ಅವಲಂಬಿಸದೆ ನೀಡಬೇಕು. ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ವಿಬಿ ರಾಮ್ ಜಿಯನ್ನು ಅನುಷ್ಠಾನ ಮಾಡುವುದಿಲ್ಲವೆಂದು ನಿರ್ಣಯಿಸಿರುವುದರಿಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ 100 ದಿನದ ಕೆಲಸವನ್ನು ನೀಡಬೇಕು. ಮಳೆ ಬಾರದಿರುವುದು ಮತ್ತು ಬಿಸಿಲಿನ ಕಾರಣ ಬೆಳಗ್ಗೆ 7ರಿಂದ 11ಗಂಟೆವರೆಗೆ ಕೆಲಸ ನೀಡಬೇಕು. ಕೆಲಸದ ವೇಳೆ ಮೃತ ಕೂಲಿಕಾರರಿಗೆ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಸದಸ್ಯರಾದ ಯಮನಪ್ಪ ಕುಂಬಾರ, ರಾಘವೇಂದ್ರ ಪಂಪಾಪತಿ ಅಲಾಯಿಕುಣಿ, ಮಂಜುನಾಥ ಪಗಡದಿನ್ನಿ, ಕೆಂಚಪ್ಪ ಕುರಿ, ಕರಿಯಪ್ಪ ಭೋವಿ, ನಾಗಪ್ಪ ಹಡಪದ, ಅಬ್ದುಲ್ ರೆಹಮಾನ್, ಮುದಿಯಪ್ಪ ಇತರರಿದ್ದರು.